ಸ್ವಾಭಿಮಾನಕ್ಕಾಗಿ ದಲಿತರು ಇನ್ನಾದರೂ ನಾಯಕತ್ವ ಬೆಳೆಸಿ ಇತಿಹಾಸ ಸೃಷ್ಟಿಸಿ: ಎಂ. ನಂಜುಂಡಸ್ವಾಮಿ

ಅರಕಲಗೂಡು: ಭಾರತದ ನೆಲದಲ್ಲಿ ನಾಗರಿಕತೆ ಹುಟ್ಟಿದ್ದು ದಲಿತರಿಂದ, ಈ ಸಮುದಾಯಕ್ಕೆ ಸೇರಿದ್ದ ಪಲ್ಲವರು, ಚಾಲುಕ್ಯರು, ಚೋಳರು, ಹೊಯ್ಸಳರ ಕುರಿತು ಇತಿಹಾಸಕಾರರು ತಪ್ಪು ಕಥೆ ಕಟ್ಟಿ ಇತಿಹಾಸವನ್ನೆ ತಿರುಚಿದ್ದಾರೆ, ಇನ್ನಾದರೂ ದಲಿತ ವರ್ಗ ಒಗ್ಗೂಡುವ ಮೂಲಕ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಅಗ್ನಿಶಾಮಕ ಹಾಗೂ ಗೃಹ ಇಲಾಖೆ ಎಡಿಜಿಪಿ ಎಂ. ನಂಜುಂಡಸ್ವಾಮಿ ತಿಳಿಸಿದರು. 

ಪಟ್ಟಣದ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದಲಿತರ ಐಕ್ಯತಾ ಸಮಾವೇಶದ ಅಂಗವಾಗಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಇತಿಹಾಸವನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳುವುದು ಅಗತ್ಯವಿದೆ. ಈ ದೇಶವನ್ನು ಆಳಿದ ಪಲ್ಲವರು, ಚೋಳರು, ಹೊಯ್ಸಳರು ಪರಿಶಿಷ್ಟ ಜನಾಂಗಕ್ಕೆ ಸೇರಿದವರಾಗಿದ್ದರು. ಚರಿತ್ರೆಯನ್ನು ವಿರೂಪಗೊಳಿಸಿ ಚರಿತ್ರೆಯನ್ನು ತಿರುಚಲಾಗುತ್ತಿದೆ ಈ ಕುರಿತು ಎಚ್ಚರವಹಿಸುವುದು ಅಗತ್ಯ. ದಲಿತ ವರ್ಗದವರು ಕಳ್ಳ, ಸುಳ್ಳ ಮಳ್ಳರ ಹಿಂದೆ ತಿರುಗುವುದನ್ನು ಬಿಟ್ಟು ಅಂಬೇಡ್ಕರ್ ಚಿಂತನೆಗಳ ಮೂಲಕ ಒಗ್ಗೂಡುವ ಕ್ರಿಯೆ ನಡೆಯಬೇಕಿದ್ದು ಅದಕ್ಕೆ ಇಂದಿನ ಐಕ್ಯತಾ ಸಮಾವೇಶ ಮುನ್ನುಡಿ ಬರೆಯಬೇಕು. ದೇಶದ ಪವಿತ್ರ ಗ್ರಂಥವಾದ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕಾರ್ಯ ನಡೆಯಬೇಕಿದೆ, ಬುದ್ದ ಬಸವರ ನಂತರ ಅಂಬೇಡ್ಕರ್ ಹಿಂದುಳಿದ ಹಾಗೂ ತುಳಿತಕ್ಕೊಳಗಾದವರಿಗೆ ಧ್ವನಿಯಾಗುವ ಮೂಲಕ ಚರಿತ್ರೆಯನ್ನು ಬದಲಿಸಿದರು. ಇವರ ಆಶಯಗಳನ್ನು ಎತ್ತಿಹಿಡಿಯವ ಕಾರ್ಯ ವನ್ನು ಎಲ್ಲರೂ ಒಗ್ಗೂಡುವ ಮೂಲಕ ಸಾಧಿಸಬೇಕಿದೆ ಎಂದರು. 

ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಸಮಾಜದ ದಮನಿತರು, ತುಳಿತಕ್ಕೊಳಗಾದವರು, ಮಹಿಳೆಯರಿಗೆ ಸಂವಿಧಾನದ ಮೂಲಕ ಧ್ವನಿಯಾದ ಅಂಬೇಡ್ಕರ್ ಜಯಂತಿ ಭಾರತದ ಪವಿತ್ರ ಹಬ್ಬವಾಗಬೇಕು. ಪ್ರತಿ ಮನೆ,ಮನೆಯಲ್ಲೂ ಅಂಬೇಡ್ಕರ್ ಜಯಂತಿಯ ಆಚರಣೆ ನಡೆಯುವಂತಾಗಬೇಕು, ಸ್ವಾಭಿಮಾನಿ ಸಮಾಜ ರೂಪುಗೊಳ್ಳಬೇಕು, ಈ ಐಕ್ಯತಾ ಸಮಾವೇಶ ದೇಶಕ್ಕೆ ಮಾಧರಿ ಯಾಗಿ ನಿರಂತರವಾಗಿ ಹೀಗೆ ಮುಂದುವರೆದು ಬರಲಿ ಎಂದರು. 

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಮಾತನಾಡಿ, ಸಂವಿಧಾನದ ಆಶಯಗಳಿಗೆ ದೊಡ್ಡಪ್ರಮಾಣದಲ್ಲಿ ಧಕ್ಕೆ ಬರುತ್ತಿರುವ ಇಂದಿನ ಸಂದರ್ಭದಲ್ಲಿ ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದ ವರಗಗಳು ಒಗ್ಗೂಡಿ ನಡೆಯುತ್ತಿರುವ ಐಕ್ಯತಾ ಸಮಾವೇಶ ದೇಶಕ್ಕೆ ಹೊಸ ದಿಕ್ಕನ್ನು ತೋರುವ ಬೆಳಕಾಗಿ ಕಂಡು ಬರುತ್ತಿದೆ. ಹಿಜಾಬ್ , ಹಲಾಲ್ ಮೂಲಕ ತಿನ್ನುವ ಆಹಾರ ಉಡುವ ಬಟ್ಟೆ, ವ್ಯಾಪಾರ ಮಾಢುವ ಸ್ಥಳ ಎಲ್ಲವುಗಳ ಮೇಲೆ ನಿಯಂತ್ರಣ ಸಾಧಿಸುವ ಹುನ್ನಾರ ನಡೆಯುತ್ತಿರುವ ಸಂದರ್ಭದಲ್ಲಿ ಅಂಬೇಡ್ಕರ್ ಹಬ್ಬದ ಮೂಲಕ ಸಂವಿಧಾನದ ಆಶಯಗಳು ಎಲ್ಲರ ಬದುಕಿನಲ್ಲಿ ಬೆಳಕು ಮೂಡಿಸಿ ನಮ್ಮ ರಾಷ್ಟ್ರ ಗ್ರಂಥವಾಗಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ 

ಭಾರತದ ಹಣದ ನೋಟ್ ನಲ್ಲಿ ಅಂಬೇಡ್ಕರ್ ಭಾವಚಿತ್ರ ಇರಬೇಕು ಅಂಥಹ ಮಹಾನ್ ಪುರುಷ ಅವರು. ಭಾರತದ ಸೂರ್ಯ, ಸಂವಿಧಾನ ಯಾರ ಪರ ಅಲ್ಲ ಅದು ಜೀವಪರ, ಸೂರ್ಯ ರಶ್ಮಿ ಯಾರ ಮೇಲೆ ಬೀಳುತ್ತಿದೆ ಅವರೆಲ್ಲರೂ ಅಂಬೇಡ್ಕರ್ ಅವರಿಗೆ ಖುಣಿಯಾಗಿರಬೇಕು. ರಾಜ್ಯ ರಾಜಕಾರಣದಲ್ಲಿ ಈ ಸಮಾವೇಶ ದಿಕ್ಸೂಜಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎಎಸ್ ಅಧಿಕಾರಿ ಕೆ.ಎಂ. ಜಾನಕಿ, ಬೀದರ್ನ ವರಜ್ಯೋತಿ ಬಂತೇಜಿ, ಚಿತ್ರ ನಟ ಪ್ರೇಮ್, ಕೆಎ ಎಸ್ ಅಧಿಕಾರಿ ಚನ್ನಕೇಶವ, ಕೇಂದ್ರ ಅಂಬೇಡ್ಕರ್ ಪ್ರಶಸ್ತಿ ಪುರಸ್ಖೃತ ಕೆರಗೋಡು ಗುರುಪ್ರಸಾದ್, ಸಮಾಜ ಸೇವಕಿ ನಜ್ಮಾ ನಸೀರ್ , ವಕೀಲ ಬಿ.ಸಿ.ರಾಜೇಶ್ ಮಾತನಾಡಿದರು. ಬಸವ ಲಿಂಗ ಸ್ವಾಮೀಜಿ, ಕ್ರೈಸ್ತ ಸಂಘಟನೆಯ ಸ್ಟ್ಯಾನಿ ಪಿಂಟೊ, ಸಮುದಾಯ ಕರ್ನಾಟಕದ ರಾಜ್ಯ ಸಹ ಕಾರ್ಯದರ್ಶಿ, ಕೆ.ಎಸ್.ವಿಮಲ, ಅಂಬೇಡ್ಕರ್ ಹಬ್ಬ ಆಚರಣಾ ಸಮಿತಿ ಅಧಕ್ಷ ಲೋಕನಾಥ್,ಬಿಎಸ್ ಪಿ ಜಿಲ್ಲಾ ಘಟಕದ ಅಧ್ಯಕ್ಷ ಅತ್ನಿ ಹರೀಶ್ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ, ಸದಸ್ಯ ಅನಿಕೇತನ್, ಮುಖಂಡರಾದ ಗಣೇಶ್ ವೇಲಾಪುರಿ, ಎಂ.ಸಿ.ರಾಜೇಂದ್ರ, ನಿಂಗರಾಜ್, ಪೃಥ್ವಿರಾಜ್, ಚಂದ್ರಪ್ಪ, ಜನಾರ್ಧನ್, ರಾಮು, ಸಣ್ಣಸ್ವಾಮಿ ಇದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಳಸ ಹೊತ್ತು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅಂಬೇಡ್ಕರ್ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಿದರು.

Post a Comment

0 Comments