ಅರಕಲಗೂಡು: ತಾಲ್ಲೂಕಿನ ಹುಲಿಕಲ್ ಗ್ರಾಮದ ಪ್ರಸನ್ನ ವೆಂಕಟ ರಮಣ ಸ್ವಾಮಿ ಬ್ರಹ್ಮ ರಥೋತ್ಸವವು ಶುಕ್ರವಾರ ವೈಭವದಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನಡೆಸಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು. ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಸೂರ್ಯ ಮಂಡಲೋತ್ಸವ, ಕೃಷ್ಣಗಂಧ ಮಂಟಪೋತ್ಸವ, ಸಾರ್ವೆ ಮಂಟಪೋತ್ಸವಗಳನ್ನು ನಡೆಸಲಾಯಿತು. ಉತ್ಸವದಲ್ಲಿ ಬಂದ ದೇವರ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜಾ ಕಾರ್ಯ ನಡೆಸಲಾಯಿತು.
ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯ ಭಕ್ತರು ರಥ ಬೀದಿಯಲ್ಲಿ ತೇರನ್ನು ಎಳೆದರು. ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಪತ್ರವನ್ನು ತೂರಿ ಸಂಭ್ರಮಿಸಿದರು. ರಥ ಎಳೆಯುತ್ತಿದ್ದ ಭಕ್ತರಿಗೆ ಬಿಸಿಲಿನ ತಾಪ ನಿವಾರಿಸಿಕೊಳ್ಳಲು ಮಜ್ಜಿಗೆ, ತಂಪು ಪಾನೀಯಗಳನ್ನು ಜನರು ವಿತರಿಸಿದರು.
ರಥ ಸ್ವ ಸ್ಥಾನಕ್ಕೆ ಮರಳಿದ ಬಳಿಕ ವಸಂತೋತ್ಸವ ನಡೆಸಿ ಪಾನಕ, ಪನಿವಾರಗಳನ್ನು ವಿತರಿಸಲಾಯಿತು. ಸಂಜೆ ಅವರೋಹಣ ಹಾಗೂ ರಥದ ಮೇಲೆ ವಿವಿಧ ಕೈಂಕರ್ಯ, ರಾತ್ರಿ ಶಾಂತೋತ್ಸವ ಹಾಗೂ ಆಂದೋಳಿಕೋತ್ಸವ ನಡೆಸಲಾಯಿತು. ಮಾಜಿ ಸಚಿವ ಎ.ಮಂಜು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಎಂ.ಟಿ.ಕೃಷ್ಣೇಗೌಡ, ಬಿಜೆಪಿ ಮುಖಂಡ ಎಚ್.ಯೋಗಾರಮೇಶ್, ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಆರ್. ಕಸ್ತೂರಿ ರಂಗನ್, ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರತೋತ್ಸವದ ಅಂಗವಾಗಿ ಬೀಡು ಬಿಟ್ಟಿದ್ದ ಜಾತ್ರೆಯಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯಿತು.
0 Comments