ಅರಕಲಗೂಡಿನಿಂದ ಸ್ಪರ್ಧಿಸಲ್ಲ: ಕೃಷ್ಣೇಗೌಡರಿಂದ ಗೌರವ ಸ್ವೀಕರಿಸಿ ಸಿದ್ದರಾಮಯ್ಯ ಸ್ಪಷ್ಟನೆ

ಅರಕಲಗೂಡು: ಕ್ಷೇತ್ರದ ಹುಡುಕಾಟದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸ್ಪರ್ಧಿಸುವ ಕುರಿತು ಸುದ್ದಿವಹಬ್ಬಿತ್ತು. ಇದೀಗ ಸ್ವತಃ ಅವರೇ ಹೇಳಿಕೆ ಕೊಟ್ಟಿದ್ದಾರೆ. ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಇಚ್ಚೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ತಾಲೂಕಿನ ಕಾಂಗ್ರೆಸ್ ಮುಖಂಡ ಮಗ್ಗೆ ಕೃಷ್ಣೇಗೌಡ ಅವರ ಮನೆಗೆ ಭಾನುವಾಯ ಭೇಟಿ ನೀಡಿದ ವೇಳೆ, ಅರಕಲಗೂಡಿಗೆ ನೀವು ಪದೇ ಪದೇ ಆಗಮಿಸುತ್ತಿರುವ ಕಾರಣ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹಬ್ಬಿದೆ ಎನ್ನುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅರಕಲಗೂಡು ಕ್ಷೇತ್ರದಿಂದ ನಾನು ಖಂಡಿತ ಇಲ್ಲಿ ಸ್ಪರ್ಧೆ ಮಾಡಲ್ಲ ಎಂದು ಖಡಕ್ಕಾಗಿ ಉತ್ತರಿಸಿದರು.
ಜೆಡಿಎಸ್ ಮತ್ತು ಬಿಜೆಪಿಯ ಹಲವು ಮುಖಂಡರು ಕಾಂಗ್ರೆಸ್ ಸೇರುವ ಕುರಿತು ಮಾತುಕತೆ ನಡೆದಿದೆ ಹೊರತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಮತದಾರರ ಒಲವು ಯಾರ ಕಡೆ ಒಲಿಯಲಿದೆ ಎನ್ನುವ ಬಗ್ಗೆ ಸರ್ವೆ ನಡೆಸಿ ಜನಾಭಿಪ್ರಾಯ ಗಳಿಸುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಲಿದೆ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದಷ್ಟು ಬಂಡಾಯದ ಬಿಸಿ ಏಳುವುದು ಸಹಜ. ಇದನ್ನು ಶಮನ ಪಡಿಸುತ್ತೇವೆ. ಕಾಂಗ್ರೆಸ್ ಸಂಘಟನೆಗೆ ಪೆಟ್ಟು ಬೀಳದ ರೀತಿಯಲ್ಲಿ ಚುನಾವಣೆಗಿಂತ ಮುಂಚಿತವಾಗಿ ಅಭ್ಯರ್ಥಿ ಆಯ್ಕೆ ಘೋಷಿಸಲಾಗುವುದು ಎಂದು ಹೇಳಿದರು.
ಇಬ್ರಾಹಿಂ ನಮ್ಮ ಪಕ್ಷ ಬಿಟ್ಟಿದ್ದಾರೆ ಹಾಗಾಗಿ ಅವರು ಅಧ್ಯಕ್ಷರಾದ್ರು ಆಗಲಿ ಏನಾದ್ರು ಆಗಲಿ ಎಂದರು.

ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿ ಮೈಸೂರು ಪೇಟ ತೋಡಿಸಿ ಗೌರವಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಣ, ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಮುಖಂಡರಾದ ಡಾ. ದಿನೇಶ್ ಭೈರೇಗೌಡ, ಬಸವಾಸೆ ರಂಗಸ್ವಾಮಿ, ಎಚ್.ಕೆ. ಮಹೇಶ್, ಹೆಮ್ಮಿಗೆ ಮೋಹನ್, ಪ್ರಸನ್ನ ಕುಮಾರ್, ಜಾವಗಲ್ ಮಂಜುನಾಥ್ ಇನ್ನಿತರರು ಇದ್ದರು.

ತಾಲೂಕಿನ ಗಡಿ ಭಾಗದ ಗೊರೂರಿನಿಂದ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥಾದ ಮೂಲಕ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು. ಅರಕಲಗೂಡು ದೊಡ್ಡಮಗ್ಗೆ ವೃತ್ತದಲ್ಲಿ ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ರೇನ್ ಮೂಲಕ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಕಾರ್ಯಕರ್ತರು ಹೂ ಮಳೆ ಸುರಿಸಿ ಜೈಕಾರ ಕೂಗಿ ಸಂಭ್ರಮಿಸಿದರು.

Post a Comment

0 Comments