ಆಸ್ಪತ್ರೆಯಲ್ಲಿ ಮಗು ಅಪಹರಣ: ಹೆತ್ತಮ್ಮನ ಮಡಿಲಿಗೆ ಕಂದಮ್ಮ

ಅರಕಲಗೂಡು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ನವಜಾತ ಶಿಶುವಿನ ಅಪಹರಣ ಪ್ರಕರಣ ಹಾಗೂ ತಾಲ್ಲೂಕಿನ ಬೆಳವಾಡಿ ಬಳಿ ಕಾರಿನಲ್ಲಿ ಮೃತ ದೇಹ ಸುಟ್ಟ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ತ್ವರಿತ ಕ್ರಮ ಕೈಗೊಂಡ ಪೊಲೀಸರನ್ನು ಅಭಿನಂದಿಸುವುದಾಗಿ ಶಾಸಕ  ಎ.ಟಿ.ರಾಮಸ್ವಾಮಿ ತಿಳಿಸಿದರು.

ಮಾ 13 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶುವಿನ  ಅಪಹರಣ ನಡೆದಿತ್ತು. ಮೈಸೂರಿಗೆ ವಿವಾಹ ಮಾಡಿಕೊಡಲಾಗಿದ್ದ 
 ತಾಲ್ಲೂಕಿನ ಕಣಿಯಾರು ಕೊಪ್ಪಲು ಗ್ರಾಮದ ಸುಶ್ಮಿತಾ ಎಂಬ ಯುವತಿಗೆ ಒಂಬತ್ತು ವರ್ಷಗಳಿಂದ  ಮಕ್ಕಳಿರಲಿಲ್ಲ.  ಈ ಕುರಿತು ಕುಟುಂಬದಲ್ಲಿ ವೈಮನಸ್ಯಕ್ಕೆ ಕಾರಣವಾಗಿ ಮಗನಿಗೆ ಇನ್ನೊಂದು ಮದುವೆ ಮಾಡುವುದಾಗಿ ಪತಿಯ ತಂದೆ ತಾಯಿಗಳು ಹಟ ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ದಂಪತಿಗಳು ಕುಟುಂಬದಿಂದ ಬೇರಾಗಿ ಪ್ರತ್ಯೇಕ ವಾಸವಿದ್ದರು. ಆರು ತಿಂಗಳ ಹಿಂದೆ ಗರ್ಭಿಣಿಯಾದ  ಸುಶ್ಮಿತಾಗೆ ಗರ್ಭಪಾತವಾಗಿತ್ತು. ಮಕ್ಕಳಿಲ್ಲದ ಹಾಳಾಗುತ್ತಿರುವ ಮಗಳ ಬದುಕನ್ನು ಹಸನು ಗೊಳಿಸಬೇಕು ಎಂದು ಸುಶ್ಮಿತಾ ತಾಯಿ ಶೈಲಜಾ ಮಗ ಯಶವಂತ್, ಇನ್ನೊಬ್ಬ ಪುತ್ರಿ ಅರ್ಪಿತಾ, ಸುಮಾ ಎಂಬಾಕೆಯೊಡನೆ ಸೇರಿ ಮಗುವಿನ ಅಪಹರಣಕ್ಕೆ ಸಂಚು ರೂಪಿಸಿದರು. 

ಭಾನುವಾರ ರಾತ್ರಿ ಆಸ್ಪತ್ರೆಗೆ ಬಂದ  ಆರೋಪಿಗಳು ಎಲ್ಲ ವಾರ್ಡಗಳಿಗೆ ತೆರಳಿ ನವಜಾತ ಶಿಶುವಿಗಾಗಿ  ಶೋಧ ನಡೆಸಿದ್ದಾರೆ.  7 ಗಂಟೆಯಲ್ಲಿ  ಕೂಲಿ ಕಾರ್ಮಿಕ ಮಹಿಳೆಗೆ ಗಂಡು ಶಿಶು ಜನನವಾದ ಸುದ್ದಿ ತಿಳಿದು ರಾತ್ರಿ 12 ಗಂಟೆ  ಸಮಯದಲ್ಲಿ  ತಂತ್ರಗಾರಿಕೆಯಿಂದ ಮಗುವನ್ನು ಅಪಹರಿಸಿದ್ದಾರೆ. ಆರೋಪಿ ಮಹಿಳೆಯರು ಆಸ್ಪತ್ರೆಯಲ್ಲೆ ಉಳಿದರೆ ಯಶವಂತ ಮಗುವನ್ನು ವಾಹನದಲ್ಲಿ ಕರೆದೊಯ್ದು ಕಣಿಯಾರು ಗ್ರಾಮದ ತೋಟದ ಮನೆಯಲ್ಲಿ ಇರಿಸಿದ್ದಾನೆ. ಪುನಃ ಆಸ್ಪತ್ರೆಗೆ ಬಂದು ಮಹಿಳೆಯರನ್ನು ಕರೆದೊಯ್ದು ಮಗುವನ್ನು ಮೈಸೂರಿಗೆ ಸಾಗಿಸಿದ್ದಾರೆ  ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. 

ಪ್ರಕರಣವನ್ನು ಪತ್ತೆಹಚ್ಚಿದ ಪೊಲಿಸರು ಆರೋಪಿಗಳನ್ನು ವಶಕ್ಕೆ ಪಡೆದು  ಮಗುವನ್ನು ತಾಯಿಯ ಮಡಿಲು ಸೇರಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಶನಿವಾರ ಸುದ್ದಿಗಾರರಿಗೆ ಮಾಹಿತಿ ನಿಡಿದರು.

ತಾಲ್ಲೂಕಿನ ಬೆಳವಾಡಿ ಬಳಿ ಸುಟ್ಟ ಕಾರಿನಲ್ಲಿ ಮೃತ ದೇಹ ಪತ್ತೆಯಾದ ಪ್ರಕರಣ  ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದಿದೆ. ಪಿರಿಯಾ ಪಟ್ಟಣದ ಯುವತಿಯನ್ನು ಕೊಡಗು ಜಿಲ್ಲೆ ಕುಶಾಲನಗರಕ್ಕೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹ ಪೂರ್ವದಲ್ಲಿ  ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಇದನ್ನು ಮುಂದುವರೆಸುವಂತೆ ಬಲವಂತ ಮಾಡುತ್ತಿದ್ದ. ವಿಷಯ ತಿಳಿದ ಪತಿ,  ಸ್ನೇಹಿತರೊಂದಿಗೆ ಸೇರಿ ಯುವತಿಯಿಂದ ದೂರವಾಣಿ ಕರೆ ಮಾಡಿಸಿ ಕರೆಸಿಕೊಂಡು ತಳಿಸಿದ್ದಾರೆ. ಪ್ರಜ್ಞಾ ಹೀನನಾದ ವ್ಯಕ್ತಿಯನ್ನು ಕಾರಿನಲ್ಲಿ ಕರೆತಂದು ಬೆಳವಾಡಿ ಸಮೀಪ ಕಾರು ಸಹಿತ ಸುಟ್ಟಿರುವ ಕುರಿತು ಪೊಲೀಸರು ತನಿಖೆ ವೇಳೆ ತಿಳಿದು ಬಂದಿದೆ. ಎರಡೂ ಪ್ರಕರಣಗಳನ್ನು ಘಟನೆ ನಡೆದ  5 ದಿನದಲ್ಲೆ ಪತ್ತೆಹಚ್ಚಿರುವ ಪೊಲೀಸರ ಕಾರ್ಯ ಶ್ಲಾಘನೀಯವಾಗಿದ್ದು ಅಭಿನಂದಿಸುವುದಾಗಿ ಹೇಳಿದರು. 

ಆರೋಪಿಗಳಿಗೆ ತ್ವರಿತವಾಗಿ ಕಠಿಣ ಶಿಕ್ಷೆ ಯಾಗದ ಕಾರಣ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಇವಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾನೂನು ಇನ್ನಷ್ಟು ಬಲಗೊಳ್ಳಬೇಕು, ಮಗು ಅಪಹರಣ ಪ್ರಕರಣದಲ್ಲಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಕರ್ತವ್ಯ ಲೋಪ  ಎದ್ದು ಕಾಣುತ್ತಿದೆ.  ರಾಜ್ಯದಲ್ಲಿ ಉತ್ತಮ  ತಾಲ್ಲೂಕು ಮಟ್ಟದ ಆಸ್ಪತ್ರೆ ಎಂಬ ಹೆಸರು ಬರುತ್ತಿರುವ ಸಮಯದಲ್ಲಿ ನಡೆದ ಈ ಘಟನೆ ಕಪ್ಪು ಚುಕ್ಕೆಯಾಗಿದ್ದು ಈ ಕುರಿತು ಆಡಳಿತಾಧಿಕಾರಿಗಳು ಎಚ್ಚರ ವಹಿಸಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಪಂ ಅಧ್ಯಕ್ಷ ಅಬ್ದುಲ್ ಬಾಸಿದ್ ಉಪಸ್ಥಿತರಿದ್ದರು.

Post a Comment

0 Comments