ಅರಕಲಗೂಡು: ಇದೇನಿದು ಜನರುಬೋಡಾಡುವ ರಸ್ತೆಯೇ ಎನ್ನುವಷ್ಟು ಕೆಸರು ಗದ್ದೆಯಾಗಿದೆ. ತಾಲೂಕಿನ ಪೆಮ್ಮನಹಳ್ಳಿ ಗ್ರಾಮದ ಸಂಪರ್ಕ ರಸ್ತೆ ತೀರ ಹದಗೆಟ್ಟು ಹೋಗಿದ್ದರೂ ದುರಸ್ತಿ ಪಡಿಸದೆ ಶಾಸಕರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡಬೆಮ್ಮತ್ತಿ ಗ್ರಾಪಂ ವ್ಯಾಪ್ತಿಗೆ ಸೇರಿದ ಗ್ರಾಮದ ಮುಖ್ಯ ರಸ್ತೆ ಹಲವಾರು ವರ್ಷಗಳಿಂದ ಪೂರ್ತಿ ಹಾಳಾಗಿದೆ. ಇದೀಗ ಸತತವಾಗಿ ಸುರಿಯುತ್ತಿರುವ ಮಳೆಗೆ ಕೆಸರು ಗದ್ದೆಯಾಗಿದ್ದು ಮನೆಯಿಂದ ಹೊರ ಹೋಗಿ ರಸ್ತೆಯಲ್ಲಿ ಕಾಲಿಡಲು ಸಾಧ್ಯವಾಗುತ್ತಿಲ್ಲ. ಇದೇ ರಸ್ತೆಯಲ್ಲಿ ಗ್ರಾಮಸ್ಥರು ಪ್ರತಿನಿತ್ಯ ಸಂಚರಿಸಬೇಕು. ರೈತರು ಕೃಷಿ ಚಟುವಟಿಕೆ ನಡೆಸಲು ಜಮೀನು ಬಳಿ ತೆರಳಬೇಕಾದರೂ ಇದೇ ರಸ್ತೆ ಅವಲಂಬಿಸಬೇಕಾಗಿದೆ. ಆದರೂ ರಸ್ತೆ ಮಾತ್ರ ದುರಸ್ತಿ ಕಾಣದಾಗಿದೆ ಎಂದು ಗ್ರಾಮಸ್ಥರು ದೂರಿದರು.
ಹೆಜ್ಜೆಗೊಂದು ಗುಂಡಿ ಬಿದ್ದು ಹೊಂಡವಾಗಿರುವ ರಸ್ತೆಯಲ್ಲಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಮವಸ್ತçವೆಲ್ಲ ಕೊಳಚೆ ಅಭಿಷೇಕವಾಗುತ್ತಿದೆ. ಗ್ರಾಮಸ್ಥರು ಕೆಸರು ತುಳಿದು ಮನೆಯೊಳಗೆ ಕಾಲಿಡುವ ದುಸ್ಥಿತಿ ನಿರ್ಮಾಣವಾಗಿದೆ. ಮಾಜಿ ಶಾಸಕ ಎ. ಮಂಜು ಮತ್ತು ಹಾಲಿ ಶಾಸಕ ಎ.ಟಿ. ರಾಮಸ್ವಾಮಿ ಅವರು ರಸ್ತೆ ಅಭಿವೃದ್ಧಿ ಪಡಿಸದೆ ನಿರ್ಲಕ್ಷಿö್ಯಸಿದ್ದಾರೆ ಎಂದು ಘೋಷಣೆ ಕೂಗಿ ಗ್ರಾಮಸ್ಥರು ಕಿಡಿಕಾರಿದರು.
ಚುನಾವಣೆ ಸಮಯದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳು ಇಂತಹ ಕಷ್ಟದ ಕಾಲದಲ್ಲಿ ಇತ್ತ ತಲೆ ಹಾಕುವುದಿಲ್ಲ. ರಸ್ತೆ ಸರಿಪಡಿಸುವಂತೆ ಶಾಸಕರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿದರೂ ಕ್ಯಾರೆ ಎನ್ನಲ್ಲಿಲ್ಲ. ನಾವು ಜನಪ್ರತಿನಿಧಿಗಳಿಗೆ ಮತ ಹಾಕಿ ಅವರ ಋಣ ತೀರಿಸಿದ್ದೇವೆ, ಅಂತೆಯೇ ಅವರು ಸಹ ರಸ್ತೆ ಅಭಿವೃದ್ಧಿ ಪಡಿಸಿ ನಮ್ಮ ಋಣ ತೀರಿಸಬೇಕು. ಇಲ್ಲವಾದರೆ ಶಾಸಕರು ಮುಂದಿನ ಚುನಾವಣೆಯಲ್ಲಿ ನಮ್ಮ ಗ್ರಾಮದೊಳಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಗುಂಡಿ ರಸ್ತೆ ಮಧ್ಯದಲ್ಲಿ ನಿಂತು ಗ್ರಾಮಸ್ಥರು ಸವಾಲು ಹಾಕಿದರು.
ಪೆಮ್ಮೆನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಪಡಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿ ಕ್ರಮ ಕೈಗೊಳ್ಳಲಾಗಿದೆ.
- ರೋಹಿತ್, ಗ್ರಾಪಂ ಪಿಡಿಒ, ದೊಡ್ಡಬೆಮ್ಮತ್ತಿ.
0 Comments