ಅರಕಲಗೂಡು: ಕೋವಿಡ್- 19ನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಕ್ಷೇಮಾಭಿವೃದ್ದಿಗಾಗಿ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಅಂತಹ ಮಕ್ಕಳಿಗೆ ಪ್ರತಿ ತಿಂಗಳಿಗೆ 3500 ರೂ ಹಣ ಒದಗಿಸುವುದು, ಉಚಿತವಾಗಿ ಶಿಕ್ಷಣ ನೀಡುವ ವ್ಯವಸ್ಥೆ, ಉನ್ನತ ಶಿಕ್ಷಣಕ್ಕೆ ಲ್ಯಾಪ್ ನೀಡುವುದು, ಹೆಣ್ಣು ಮಗುವಾಗಿದ್ದಲ್ಲಿ 21 ವರ್ಷ ತುಂಬಿದಾಗ 1 ಲಕ್ಷ ರೂ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ತಾಲೂಕಿನ ಕೊಣನೂರು ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3ನೇ ಕೋವಿಡ್ ಅಲೆಯನ್ನು ತಡೆಯಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗಳಲ್ಲೂ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಸಭೆ ನಡೆಸಲಾಗುತ್ತಿದೆ ಎಂದರು.
ಸದ್ಯಕ್ಕೆ 3ನೇ ಅಲೆಯು ಪ್ರಾರಂಭವಾಗುವ ಭೀತಿಯ ನಡುವೆಯೇ ಶಾಲೆಗಳು ಪ್ರಾರಂಭವಾಗುತ್ತಿರುವ ಕುರಿತು ಶಿಕ್ಷಣ ಸಚಿವರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಎರಡೂ ಅಥವ ಒಬ್ಬ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳನ್ನು ಗುರುತಿಸಲು ಅಂಗನವಾಡಿ ಕಾರ್ಯಕತೆಯರ ಮುಖೇನ ಸರ್ವೆ ಮಾಡಲಾಗುತ್ತಿದೆ. 2ನೇ ಅಲೆ ಪೋಷಕರನ್ನು ಕಳೆದುಕೊಂಡಿರುವ ಹಲವು ಮಕ್ಕಳನ್ನು ಸಂಬAಧಿಕರು ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಅಕಸ್ಮಾತ್ ಆಗುವುದಿಲ್ಲವೆಂದಲ್ಲಿ ನಮ್ಮ ಇಲಾಖೆಯ ವತಿಯಿಂದ ದತ್ತು ಪಡೆದು ಪೋಷಿಸಲಾಗುತ್ತದೆ. ಯಾರಾದರು ದತ್ತು ಪಡೆಯಲು ಬಯಸಿದಲ್ಲಿ ನಿಯಮಾನುಸಾರ ದತ್ತು ನೀಡಲಾಗುವುದು. ದಾನಿಗಳು ಇಂತಹ ಮಕ್ಕಳ ಭವಿಷ್ಯವನ್ನು ರೂಪಿಸಲು ಮುಂದೆ ಬಂದಲ್ಲಿ ದಾನಿ ಮತ್ತು ಮಕ್ಕಳ ನಡುವಿನ ಕೊಂಡಿಯಾಗಿ ಇಲಾಖೆಯು ಕೆಲಸ ಮಾಡಿ ಮುಗುವಿನ ಭವಿಷ್ಯವನ್ನು ರೂಪಿಸಲು ಶ್ರಮಿಸಲಿದೆ, ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ 3ನೇ ಅಲೆಗೆ ಮಕ್ಕಳು ಬಲಿಯಾಗಬಹುದು ಎಂದು ತಜ್ಞರ ಅಭಿಪ್ರಾಯವಿದ್ದು, ಈ ಕುರಿತು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿ, ಈಗಾಗಲೇ 15 ಜಿಲ್ಲೆಗಳ ಪ್ರವಾಸ ಮಾಡಿದ್ದು ಪ್ರತಿಯೊಂದು ಮನೆಯಲ್ಲಿಯೂ ಸೋಂಕಿತ ಮಕ್ಕಳನ್ನು ಗುರುತಿಸುವ ಮತ್ತು ತಾಲೂಕು ಮಟ್ಟದಲ್ಲಿ ಮಕ್ಕಳಿಗಾಗಿ ವಿಶೇಷ ಕೋವಿಡ್ ಕೇರ್ ಸೆಂಟರ್ ಗಳನ್ನು ನಿರ್ಮಿಸಲಾಗುತ್ತದೆ. ವಿಶೇಷ ಕೋವಿಡ್ ಕೇರ್ ಸೆಂಟರ್ ನಲ್ಲಿ 0ಯಿಂದ 18 ವರ್ಷದವರೆಗಿನ ವಯೋಮಾನದ ಮಕ್ಕಳಿಗೆ ಚಿಕಿತ್ಸೆ ನೀಡಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ ಪೀಡಿಯಾಟ್ರಿಕ್ ಕೋವಿಡ್ ವಾರ್ಡ ಗಳನ್ನು ಸ್ಥಾಪಿಸುವ ಕಾರ್ಯ ತಾಲೂಕು ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ಪ್ರಾರಂಭವಾಗಿದೆ. ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳಿಗಾಗಿ 50 ಹಾಸಿಗೆಗಳನ್ನು ಕಾಯ್ದಿರಿಸಲಾಗುತ್ತದೆ. ಮಕ್ಕಳ ಕೋವಿಡ್ ಚಿಕಿತ್ಸೆಗೆ ಅಗತ್ಯವರುವ ಔಷಧ ಮತ್ತು ಸಾಮಾಗ್ರಿಗಳನ್ನು ನೀಡಲು ಆರೋಗ್ಯ ಇಲಾಖೆಯಿಂದ ಸಿದ್ಧತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ರಾಜ್ಯದಲ್ಲಿನ ರಾಜಕೀಯ ಗೊಂದಲಗಳಿದ್ದರೂ ತಲೆಕೆಡಿಸಿಕೊಳ್ಳದೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರತಿನಿಧಿಯಾಗಿ ಕೋವಿಡ್ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಜಿಲ್ಲಾವಾರು ಸಭೆಗಳನ್ನು ನಡೆಸತ್ತಿರುವ ಸಚಿವೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಸಂಪಾದಕ- ರವಿ
0 Comments