ಅರಕಲಗೂಡು: ಕಾಫಿ ಬೆಳೆಗೆ ಮಳೆ ಕಂಟಕ, ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಗೆ ಮಲ್ಲಿಪಟ್ಟಣ ಹೋಬಳಿಯಲ್ಲಿ ಕಾಫಿ ಫಸಲು ಅಪಾರ ಪ್ರಮಾಣದಲ್ಲಿ ನೆಲಕ್ಕುದುರಿ ಮಣ್ಣುಪಾಲಾಗಿದ್ದು ಬೆಳೆಗಾರರಿಗೆ ದಿಕ್ಕು ತೋಚದಾಗಿದೆ.
ಅರೆಮಲೆನಾಡು ಪ್ರದೇಶವಾದ ಮಲ್ಲಿಪಟ್ಟಣ ಹೋಬಳಿಯಲ್ಲಿ ಅಪಾರ ರೈತರು ಪ್ರಮುಖವಾಗಿ ಕಾಫಿ ಬೆಳೆಯನ್ನೆ ನೆಚ್ಚಿಕೊಂಡು ಬದುಕಿಗೆ ಆಧಾರವಾಗಿಸಿಕೊಂಡಿದ್ದಾರೆ. ಹೋಬಳಿಯ ಮದಲಾಪುರ, ಕೆಲಗಳಲೆ, ಕೋಟಿ, ಬೈಸೂರು, ಹಿಪ್ಪಲಿ, ಬಾಗ್ದಾಳ್, ಮತ್ತರ, ಬೂದನೂರು, ಮಲ್ಲಿಪಟ್ಟಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಕಾಫಿ ತೋಟಗಳಿದ್ದು ಈ ಬಾರಿ ಫಸಲು ಸಹ ಉತ್ತಮವಾಗಿತ್ತು. ಕೆಲವು ಕಡೆ ಫಸಲು ಸಾಕಷ್ಟ ಹಣ್ಣಾಗಿದೆ. ದುರಾದೃಷ್ಟವಶಾತ್ ಎಡಬಿಡದೆ ಬೀಳುತ್ತಿರುವ ಮಳೆ ಕಾಫಿ ಬೆಳೆಗೆ ಕಂಟಕವಾಗಿ ಪರಿಣಮಿಸಿದ್ದು ಅರೆಬಿಕ್ ಗಿಡಗಳಲ್ಲಿ ಕಟ್ಟಿರುವ ಕಾಯಿ, ಹಣ್ಣು ಉದುರಿ ಹಾನಿಗೊಳಗಾಗಿದೆ. ಫಸಲು ಹಾಳಾಗುತ್ತಿರುವುದನ್ನು ಕಂಡು ಮುಂದೇನು ಎಂಬ ಚಿಂತೆಯಲ್ಲಿ ಮುಳುಗಿರುವ ಬೆಳೆಗಾರರ ಬಾಳಲ್ಲಿ ಮಂಕು ಕವಿದಿದೆ.
ನವೆಂಬರ್ ತನಕ ಮಳೆ ಸುರಿಯುತ್ತದೆ ಎಂದು ಬೆಳೆಗಾರರು ಕನಸಿನಲ್ಲೂ ಎಣಿಸಿರಲಿಲ್ಲ. ಈ ಸಲ ಮಾರ್ಚ್ ತಿಂಗಳಲ್ಲೇ ಮಳೆಯಾದ ಕಾರಣ ಕಾಫಿ ಹೂವು ಬೇಗ ಬಂದ ಪರಿಣಾಮ ಡಿಸೆಂಬರ್ ನಲ್ಲಿ ಬರಬೇಕಿದ್ದ ಕಾಫಿ ಅಕ್ಟೋಬರ್ ನಲ್ಲೆ ಹಣ್ಣಾಗಿ ಕಟಾವಿಗೆ ಬಂದಿದೆ. ಸತತವಾಗಿ ಬೀಳುತ್ತಿರುವ ಮಳೆಯ ಕಾರಣ ಕಟಾವು ಮಾಡಲು ಸಾಧ್ಯವಾಗದೆ ಹಣ್ಣು ಉದುರುತ್ತಿದೆ. ಕಷ್ಟಪಟ್ಟು ಕಟಾವು ನಡೆಸಿದರೂ ಅದನ್ನು ಸಂಸ್ಕರಿಸಿ ಒಣಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೇ. 50 ರಷ್ಟು ಬೆಳೆಯೂ ಬೆಳೆಗಾರರಿಗೆ ಸಿಗುತ್ತಿಲ.್ಲ ಹೀಗಾಗಿ ಕಾಫಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾಫಿ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆಯುವ ಕಾಳು ಮೆಣಸು ಸಹ ಮಳೆಗೆ ಸಿಲುಕಿ ಹಾಳಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರು ಕಣ್ಣೀರಿಡುತ್ತಿದ್ದಾರೆ.
ಒಂದೆಡೆ ಮಳೆ ಹೊಡೆತ ಮತ್ತೊಂದರೆ ಕಾರ್ಮಿಕರ ಕೊರತೆ ಕೂಡ ವಿಫರೀತವಾಗಿದೆ.
ಹವಾಮಾನ ವೈಪರಿತ್ಯದ ಪರಿಣಾಮ ಗಿಡದಲ್ಲಿ ಕಾಫಿ ಒಂದೇ ಬಾರಿಗೆ ಹಣ್ಣಾಗುತ್ತಿಲ್ಲ. ಎರಡು ಮೂರು ಹಂತದಲ್ಲಿ ಹಣ್ಣು ಬರುತ್ತಿದೆ. ಕಾರ್ಮಿಕರ ಕೊರತೆಯಿಂದ ಪದೆ ಪದೇ ಕೊಯಿಲು ಮಾಡುವುದು ಕಷ್ಟಸಾಧ್ಯವಾಗುತ್ತಿದೆ. ಶೇ 10 ರಿಂದ 15 ರಷ್ಟು ಹಣ್ಣು ಈಗಾಗಲೆ ಉದುರಿ ಹೋಗಿದೆ. ಶೀತ ಬಾದೆ ಹೆಚ್ಚಿದ ಕಾರಣ ಕಾಳು ಮೆಣಸಿನ ಬಳ್ಳಿಗಳು ಸಾಯುತ್ತಿವೆ. ಹೀಗಾಗಿ ಉತ್ತಮ ಬೆಲೆ ಇದ್ದರೂ ಅದು ರೈತನ ಕೈಗೆ ದೊರಕದೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬAತೆ ಬೆಳೆಗಾರರ ಸ್ಥಿತಿಯಾಗಿದೆ. ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ರೈತರ ಆಗ್ರಹವಾಗಿದೆ.
ಈ ಸಲ ಕಾಫಿ ಗಿಡಗಳು ಹುಲುಸಾಗಿ ಬೆಳೆದು ಫಸಲು ಕೂಡ ಉತ್ತಮವಾಗಿತ್ತು. ಕಾಫಿ ಹಾಗೂ ಕಾಳು ಮೆಣಸಿಗೂ ಉತ್ತಮ ಧಾರಣೆ ಇತ್ತು. ಆದರೆ ಅಪಾರ ಸಾಲ ಮಾಡಿ ಬೆಳೆದ ಆಸೆಯ ಬೆಳೆಯೆ ರೈತರ ಕೈಗೆ ಹತ್ತದ ನಿರಾಶೆ ಮೂಡಿಸಿದೆ. ಒಂದೇ ಸಮನೆ ಸುರಿಯುತ್ತಿರುವ ಅಬ್ಬರದ ಮಳೆ ಹೊಡೆತಕ್ಕೆ ಹಣ್ಣು ಉದುರಿ ರೈತರು ಆರ್ಥಿಕವಾಗಿ ಅಪಾರ ನಷ್ಟ ಅನುಭವಿಸುವಂತಾಗಿದೆ. ತಹಸೀಲ್ದಾರ್ ಅವರು ಹೋಬಳಿಯ ಕಾಫಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳೆಗಾರರಿಗೆ ಆದ ನಷ್ಟ ತುಂಬಿಕೊಡಲು ಸರ್ಕಾರ ಪರಿಹಾರ ಬಿಡುಗಡೆ ಮಾಡಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು.
- ಎಂ.ಆರ್. ರಂಗಸ್ವಾಮಿ, ಕಾಫಿ ಬೆಳೆಗಾರರು ಮತ್ತು ಮಲ್ಲಿಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷರು.
0 Comments