ಅರಕಲಗೂಡು: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ನಡೆದ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವ್ಯವಸ್ಥೆಯೇ ಕಲುಷಿತಗೊಂಡಿರುವ ಇಂದಿನ ಸಮಾಜವನ್ನು ಸರಿದಾರಿಗೆ ತರಲು ಗಾಂಧಿ ವಿಚಾರ ಧಾರೆಗಳು ಅತ್ಯಂತ ಹೆಚ್ಚು ಪ್ರಸ್ತುತವಾಗಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಮಹಾತ್ಮ ಗಾಂಧಿಯವರು ಕೇವಲ ವಿಚಾರಗಳನ್ನಷ್ಟೆ ಹೇಳಲಿಲ್ಲ, ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅದರಂತೆ ಬಾಳಿ ತೋರಿಸಿದರು. ರಾಕ್ಷಸೀ ಶಕ್ತಿಗಳ ವಿರುದ್ದ ಕೇವಲ ನೈತಿಕ ಬಲದಿಂದ ಹೋರಾಟ ನಡೆಸಿ ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ‍್ಯ ದೊರಕಿಸಿಕೊಟ್ಟ ಇವರ ವ್ಯಕ್ತಿತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ದೇಶದ ಎರಡನೇ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದ, ಸರಳತೆ, ಸಜ್ಜನಿಕೆಗೆ ಶಾಸ್ತ್ರೀಯವರು ಹೆಸರಾಗಿದ್ದು ಇವರ ಆದರ್ಶಗಳು ನಮ್ಮ ಬದುಕಿಗೆ ಸ್ಫೂರ್ಥಿಯಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮೂರು ಮಂದಿ ಹಿರಿಯ ನಾಗರೀಕರನ್ನು ಗೌರವಿಸಲಾಯಿತು. ಅಕ್ರಮ, ಸಕ್ರಮ ಯೋಜನೆಯ 10 ಮಂದಿ ಫಲಾನುಭವಿಗಳಿಗೆ ವಸತಿ ಹಕ್ಕುಪತ್ರ ವಿತರಿಸಲಾಯಿತು.
ಪಪಂ ಅಧ್ಯಕ್ಷ ಹೂವಣ್ಣ, ಸದಸ್ಯ ಕೃಷ್ಣಯ್ಯ, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ತಾಪಂ ಇಒ ಎನ್. ರವಿಕುಮಾರ್, ವಿವಿಧ ಇಲಾಖೆ ಆಧಿಕಾರಿಗಳು ಪಾಲ್ಗೊಂಡಿದ್ದರು.
0 Comments