ಅರಕಲಗೂಡು: ಆರೋಗ್ಯವೇ ಬಹುಮುಖ್ಯ, ಗ್ರಾಮೀಣ ಭಾಗದಲ್ಲಿ ಬಹಳಷ್ಟು ಜನ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದು ಇವರಿಗೆ ಪೌಷ್ಠಿಕಯುಕ್ತ ಆಹಾರ ಸೇವನೆಯ ಮಹತ್ವ ಕುರಿತು ಮಾಹಿತಿ ನೀಡುವ ಸಂಗಡ ಸರ್ಕಾರದ ಸವಲತ್ತನ್ನು ತಲುಪಿಸುವ ಕೆಲಸ ನಡೆಯಬೇಕಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶುಕ್ರವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೋಷಣ್ ಅಭಿಯಾನ ಮಾಸಾಚರಣೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌಷ್ಟಿಕಾಂಶದ ಕೊರತೆಯಿಂದ ಬಳಲುವ ಮಹಿಳೆಯರು ಮತ್ತು ಮಕ್ಕಳು ಹಲವು ರೋಗಗಳಿಗೆ ತುತ್ತಾಗುತ್ತಿದ್ದು ಇದನ್ನು ತಡೆಗಟ್ಟಲು ಸರ್ಕಾರ ಪೋಷಣ್ ಅಭಿಯಾನ ಯೋಜನೆ ಹಮ್ಮಿಕೊಂಡಿದೆ, ಇದರ ಫಲ ಜನರಿಗೆ ತಲುಪುವಂತೆ ಇಲಾಖೆ ಎಚ್ಚರ ವಹಿಸಬೇಕು. ಸ್ಥಳೀಯವಾಗಿ ದೊರಕುವ ಆಹಾರ ಧಾನ್ಯ, ಸೊಪ್ಪು, ತರಕಾರಿ ಹಣ್ಣುಗಳನ್ನು ಬಳಸುವ ಕುರಿತು ಅರಿವು ಮೂಡಿಸಬೇಕು. ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಂತೆ ತಿಳಿಸಿದರು.
ಅಂಗನವಾಡಿ ಕೇಂದ್ರಗಳ ಕಾರ್ಯ ಚಟುವಟಿಕೆ ಮತ್ತು ಇಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಬಾಲ ವಿಕಾಸ ಕಿರು ಹೊತ್ತಿಗೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಗೊಳಿಸಯಿತು. ಮೂವರು ಗರ್ಭಿಣಿ ಮಹಿಳೆಯರಿಗೆ ಬಳೆ ತೊಡಿಸಿ ಫಲತಾಂಭೂಲ ನೀಡಿ ಸೀಮಂತ ಶಾಸ್ತ್ರ ನಡೆಸಲಾಯಿತು. ಮಹಿಳೆಯರು ಮಡಿಲು ತುಂಬುವ ಹಾಡುಗಳನ್ನು ಹಾಡಿದರು. ಇದೇ ವೇಳೆ ಮಕ್ಕಳಿಗೆ ಅನ್ನ ಪ್ರಾಶನ ಶಾಸ್ತ್ರ ನಡೆಸಲಾಯಿತು.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ತಾಪಂ ಇಒ ಎನ್ ರವಿಕುಮಾರ್, ಸಿಡಿಪಿಒ ಹರಿಪ್ರಸಾದ್ ಉಪಸ್ಥಿತರಿದ್ದರು. ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತರು ವಿವಿಧ ಪೌಷ್ಟಿಕಾಂಶಯುಕ್ತ ಆಹಾರ, ತಿಂಡಿ, ತಿನಿಸುಗಳು ಹಾಗೂ ಹಣ್ಣು, ತರಕಾರಿಗಳ ಪ್ರದರ್ಶನ ಏರ್ಪಡಿಸಿದ್ದರು.
0 Comments