ನಿಲ್ಲುತ್ತಿಲ್ಲ ಶೀತಲ ಸಮರ: ರೋಹಿಣಿ ಸಿಂದೂರಿ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿ ಕ್ರಮಕ್ಕೆ ಆಗ್ರಹಿಸಿದ ಸಾ.ರಾ. ಮಹೇಶ್

ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಹಾಗೂ ಮೈಸೂರು ಜಿಲ್ಲಾಧಿಕಾರಿಯಾಗಿದ್ದದ ರೋಹಿಣಿ ಸಿಂದೂರಿ ನಡುವೆ ಘಟಿಸಿರುವ ಶೀತಲ ಸಮರ ಸದ್ಯಕ್ಕೆ ಮುಗಿಯುವ ಲಕ್ಣಣಗಳು ಗೋಚರಿಸುತ್ತಿಲ್ಲ, ಅದಾಗಲೇ ರೋಹಿಣಿ ವಿರುದ್ದ ಶಾಸಕರು ಸದನದಲ್ಲಿ ಹಕ್ಕುಚ್ಯುತಿ ಕೂಡ ಮಂಡಿಸಿದ್ದಾರೆ. ಅಲ್ಲಿಗೆ ಇಬ್ಬರ ನಡುವಿನ ಸಮರದ ಪ್ರತಿಧ್ವನಿ ವಿಧಾನಸಭೆಯಲ್ಲೂ ಮೊಳಗಿತು. 

ಸಾರಾ ಮಹೇಶ್ ಪ್ರಶ್ನೆಗೆ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಸರ್ಕಾರದ ಅಧಿಕಾರಿಗಳು ಅಧಿಕಾರಿಗಳಾಗಿಯೇ ಕೆಲಸ ಮಾಡಬೇಕೆ ಹೊರತು ಸರ್ವಾಧಿಕಾರಿಗಳಾಗಬಾರದು. ಇದನ್ನು ಸರಕಾರ ಸಹಿಸುವುದಿಲ್ಲ ಎಂದು ಅಧಿಕಾರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ವಿಧಾನಸಭೆಯ ಶೂನ್ಯವೇಳೆಯಲ್ಲಿ ಶಾಸಕ ಸಾ.ರಾ. ಮಹೇಶ್ ಮಂಡಿಸಿದ್ದ ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಈ ವಿಚಾರದಲ್ಲಿ ಸರ್ಕಾರ ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಸದನದ ಗಮನಕ್ಕೂ ತಂದಿದ್ದಾರೆ. 

ತನ್ನ ವ್ಯಾಪ್ತಿ ಮೀರಿ ವರ್ತನೆ ಮಾಡಿದರೆ ಅಂತಹ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ. ಕಾನೂನು ಉಲ್ಲಂಘನೆಯನ್ನು ಯಾರೇ ಮಾಡಿದರೂ ಅದು ತಪ್ಪಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಆರ್ ನಗರ ಶಾಸಕ ಸಾರಾ ಮಹೇಶ್, ರೋಹಿಣಿ ಸಿಂಧೂರಿ ಅವರು 30 ಲಕ್ಷಕ್ಕೆ ಈಜು ಕೊಳ ನಿರ್ಮಾಣ ಮಾಡಿರುವುದು ಮತ್ತು 15 ಲಕ್ಷಕ್ಕೆ ಕಚೇರಿ ನವೀಕರಣ ಮಾಡಿರುವ ಬಗ್ಗೆ ಸದನದಲ್ಲಿ ಫೋಟೋ ತೋರಿಸಿ ವಿಧಾನಸಭೆಯ ಗಮನಸೆಳೆದರು. ಶಾಸಕರ ಹಕ್ಕು, ನಗರಪಾಲಿಕೆ ಹಕ್ಕು ಮತ್ತು ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯ ಹಕ್ಕನ್ನು ಮೊಟಕು ಮಾಡಿ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತನೆ ಮಾಡಿದ್ದಾರೆ. ಕಾನೂನು ಬದ್ಧವಾಗಿ ಪ್ರಸ್ತಾಪ ಮಾಡಿದ ಕಾಮಗಾರಿ ಮತ್ತು ಅನುದಾನವನ್ನು ಬದಿಗೆ ಸರಿಸಿ ತಮಗೆ ಬೇಕಾದಂತೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಹಕ್ಕುಚ್ಯುತಿ ಕೈಗೊಳ್ಳಬೇಕೆಂದು ಸಾ.ರಾ ಮಹೇಶ್ ಸರ್ಕಾರವನ್ನು ಒತ್ತಾಯಪಡಿಸಿದ್ದಾರೆ.

Post a Comment

0 Comments