ಅರಕಲಗೂಡು: ಪಟ್ಟಣದ ಪಶು ಆಸ್ಪತ್ರೆ ಮುಂಭಾಗ ಪೊಟ್ಯಾಟೋ ಕ್ಲಬ್ ನೇತೃತ್ವದಲ್ಲಿ ಜಾನುವಾರುಗಳ ಸಾವು ಖಂಡಿಸಿ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು.
ಯೋಗಾ ರಮೇಶ್ ಮಾತನಾಡಿ, ಜನಪ್ರತಿನಿಧಿಗಳು ನಿರ್ಲಕ್ಷö್ಯ ಧೋರಣೆಯಿಂದಾಗಿ ಜಾನುವಾರುಗಳಿಗೆ ರೋಗದ ತೀವ್ರತೆ ಹೆಚ್ಚಿ ಗಬ್ಬದ ಹಸು, ಕರುಗಳು ನರಳಿ ನರಳಿ ಪ್ರಾಣ ಕಳೆದುಕೊಳ್ಳುತ್ತಿವೆ. ಲಸಿಕೆ ನೀಡಿ ಜಾನುವಾರುಗಳ ಜೀವ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಕಾಲು ಬಾಯಿ ರೋಗ ಜಾನುವಾರುಗಳಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಸ್ಕಿನ್ ಕಾಯಿಲೆ ಕೂಡ ಉಲ್ಭಣಿಸಿದೆ. ಇದಕ್ಕೆ ಔಷಧಿಯೇ ಇಲ್ಲವಂತೆ, ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇತರೆ ವಿಚಾರಗಳ ಕುರಿತು ಚರ್ಚೆ ಮಾಡುವ ಶಾಸಕರು, ಸಚಿವರು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಮೂಕರಾಗಿದ್ದಾರೆ. ಕೂಡಲೇ ಮೃತಪಟ್ಟ ಜಾನುವಾರುಗಳ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಬೇಕು. ಹಳ್ಳಿಗಳಲ್ಲಿ ಸಾಮೂಹಿಕ ಲಸಿಕೆ ಕೈಗೊಂಡು ರೋಗ ನಿಯಂತ್ರಿಸಬೇಕು. ಪಶು ವೈದ್ಯರ ಕೊರತೆ ನೀಗಿಸಿ ಜಾನುವಾರುಗಳಿಗೆ ಗುಣಮಟ್ಟದ ಚಿಕಿತ್ಸಾತ್ಮಕ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಹೈನುಗಾರಿಕೆಯನ್ನೆ ನೆಚ್ಚಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಇತ್ತ ಶುಂಠಿ, ಆಲೂಗಡ್ಡೆ ಕಟಾವು ನಡೆಸಿ ಮಾರಾಟ ಮಾಡಿದರೂ ಬೆಲೆ ಕುಸಿದು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದೇವೆ, ಅತ್ತ ಮನೆ ಕೊಟ್ಟಿಗೆಯಲ್ಲಿ 50ರಿಂದ 60 ಸಾವಿರ ರೂ ಬೆಲೆ ಬಾಳುವ ಹಸುಗಳು ದಿನನಿತ್ಯ ರೋಗಬಾಧೆ ತಾಳಲಾರದೆ ಒದ್ದಾಡಿ ಸಾಯುತ್ತಿವೆ. ನಾವು ಬದುಕು ಸಾಗಿಸುವುದಾದರೂ ಹೇಗೆ ಎಂದು ಕಂಚೇನಹಳ್ಳಿ, ಪಾರಸನಹಳ್ಳಿ ಭಾಗದ ಪ್ರತಿಭಟನಾನಿರತ ರೈತರು ಆಕ್ರೋಶ ಹೊರಹಾಕಿದರು.
ಪಶುಸಂಗೋಪನಾ ಮತ್ತು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ದಿಲೀಪ್ ಮನವಿ ಸ್ವೀಕರಿಸಿ ಮಾತನಾಡಿ, ಪಾರಸನಹಳ್ಳಿ ಗ್ರಾಮದಲ್ಲಿ ಪಶು ವೈದ್ಯರನ್ನು ನಿಯೋಜಿಸಲಾಗಿದೆ. ರೋಗದಿಂದ ಮೃತಪಡುತ್ತಿರುವ ಜಾನುವಾರುಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಪೊಟ್ಯಾಟೋ ಕ್ಲಬ್ ಮುಖಂಡರಾದ ಶಿವಲಿಂಗಶಾಸ್ತಿç, ಚಂದೇಗೌಡ, ನಳಿನಿ, ಎಸ್‌ಟಿಡಿ ರಾಮಣ್ಣ, ಲೋಕೇಶ್ ಮುಂತಾದವರು ಪಾಲ್ಗೊಂಡಿದ್ದರು.
0 Comments