ಬಸವಾಪಟ್ಟಣದಲ್ಲಿ ಬೀದಿಗಿಳಿದ ಜನ; ವೈಜ್ಞಾನಿಕವಾಗಿ ರಸ್ತೆ ವಿಸ್ತರಣೆಗೆ ಮೊಳಗಿದ ಘೋಷಣೆ, ರಾಜಕಾರಣಿಗಳು ಮುಗುಂ!

ಅರಕಲಗೂಡು: ತಾಲೂಕಿನಲ್ಲಿ ಹಾದು ಹೋಗಿರುವ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬಸವಾಪಟ್ಟಣದಲ್ಲಿ ಬುಧವಾರ ಭಾರಿ ಪ್ರತಿಭಟನೆ ನಡೆಸಿದರು.
ಬಸವಾಪಟ್ಟಣದ ಬೆಳವಾಡಿ ಸರ್ಕಲ್‌ನಲ್ಲಿ ಜಮಾಯಿಸಿದ ಕಾರ್ಯಕರ್ತರು ಹಳೇ ಬಸ್ ನಿಲ್ದಾಣ ವರೆಗೆ ಮೆರವಣಿಗೆ ಸಾಗಿ ಪುನಃ ಸರ್ಕಾರಿ ಆಸ್ಪತ್ರೆಯ ತನಕ ಘೋಷಣೆ ಕೂಗುತ್ತಾ ಊರ ಹೊರ ಭಾಗದಲ್ಲಿ ರಸ್ತೆ ಕಾಮಗಾರಿ ಅಗಲೀಕರಣದ ಸರ್ವೇ ಕಾರ್ಯ ನಡೆಸಿ ಗುತ್ತಿಗೆದಾರರು ಹಾಗೂ ಕೆಶಿಪ್ ಇಂಜಿನಿಯರ್‌ಗಳು ಸಾರ್ವಜನಿಕರ ತೆರಿಗೆ ಹಣ ಗುಳುಂ ಮಾಡಿಕೊಳ್ಳುವ ದುರುದ್ದೇಶದಿಂದ ವಿಸ್ತೀರ್ಣ ಕಡಿತಗೊಳಿಸಿ ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ನೀಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಬೆಳವಾಡಿ ಸರ್ಕಲ್‌ನಲ್ಲಿ ಧರಣಿ ಕುಳಿತು ಜನಪ್ರತಿನಿಧಿಗಳು ಮತ್ತು ಕೆಶಿಪ್ ಇಂಜಿನಿಯರ್‌ಗಳ ವಿರುದ್ದ ಕಿಡಿಕಾರಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ ಮಾತನಾಡಿ, ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆಯನ್ನು ಸರಿಯಾಗಿ ಅಗಲೀಕರಣಗೊಳಿಸಿದೆ ಮನಸ್ಸೋ ಇಚ್ಚೆ ಕಿಷ್ಕಿಂದೆಗೊಳಿಸಿ ತೀರ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ಮಾಣ ಕಾರ್ಯದಲ್ಲಿ ಹೆದ್ದಾರಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಬಸವಾಪಟ್ಟಣ ಪ್ರಮುಖ ಮಾರ್ಗದಲ್ಲಿ ಪುಟ್‌ಪಾತ್, ವಾಹನಗಳ ನಿಲುಗಡೆ ಪಾರ್ಕ್, ಡಿವೈಡರ್ ಅಳವಡಿಸದೆ ಕೇವಲ ಕಿರಿದಾದ ರಸ್ತೆ ಮಾತ್ರ ನಿರ್ಮಿಸಿ ಅನ್ಯಾಯವೆಸಲಾಗುತ್ತಿದೆ ಎಂದು ಆರೋಪಿಸಿದರು.
ಮೂಲ ಡಿಪಿಆರ್ ಅನ್ನೇ ಸರಿಯಾಗಿ ಸಿದ್ದಪಡಿಸದೆ ಲೋಪ ಎಸಗಲಾಗಿದೆ. ಇದರಿಂದ 50 ವರ್ಷಗಳಿಂದ ವಾಹನ ಸವಾರರು ಅನುಭವಿಸಿದ ಸಂಕಷ್ಟ ಪುನರಾವರ್ತನೆಯಾಗಲಿದೆ. ರಸ್ತೆ ಅಭಿವೃದ್ಧಿ ಅಭಿವೃದ್ಧಿ ಕಾಮಗಾರಿ ಸಮರ್ಪಕವಾಗಿ ನಡೆಸದಿದ್ದರೆ ಟೋಲ್ ವಸೂಲಿಗೆ ಕಡಿವಾಣ ಹಾಕುವಂತೆ ಉಗ್ರ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸ್ಥಳಕ್ಕೆ ಧಾವಿಸಿದ ಕೆಶಿಪ್ ಇಂಜಿನಿಯರ್ ಶಿವರಾಜ್ ಸಮರ್ಪಕ ಉತ್ತರ ನೀಡದೆ ಉಡಾಫೆಯಾಗಿ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಮುಖ್ಯ ಇಂಜಿನಿಯರ್ ಸ್ಥಳಕ್ಕೆ ಬರುವ ತನಕ ಕಾಮಗಾರಿ ತಡೆಯುವುದಾಗಿ ಪಟ್ಟು ಹಿಡಿದರು. ಇದಕ್ಕೆ ಒಪ್ಪಿದ ಕಿರಿಯ ಇಂಜಿನಿಯರ್ ಶಿವರಾಜ್ ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಕರ್ನಾಟಕ ರಾಷ್ಟç ಸಮಿತಿ ಪಕ್ಷದ ತಾಲೂಕು ಅಧ್ಯಕ್ಷ ಕೇಶವಮೂರ್ತಿ, ಪಕ್ಷದ ರೈತ ಘಟಕದ ತಾಲೂಕು ಅಧ್ಯಕ್ಷ ತಮ್ಮೇಗೌಡ, ರೈತ ಸಂಘದ ಮುಖಂಡರಾದ ಎಚ್.ಇ. ಜಗದೀಶ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ರೈತ ಸಂಘ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೊಣನೂರು ಪೊಲೀಸರು ಬಂದೋಬಸ್ ಕೈಗೊಂಡಿದ್ದರು.

Post a Comment

0 Comments