ಹೊಗೆಸೊಪ್ಪು 100ರಿಂದ 185 ರೂಗೆ ಎರಡನೇ ದಿನದ ಮಾರಾಟ

ಅರಕಲಗೂಡು: ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಇಂದು ಎರಡನೇ ದಿನದ ಹರಾಜಿನಲ್ಲಿ ೧೦೦ರಿಂದ ೧೮೫ ರೂಪಾಯಿಗೆ ಮಾರಾಟವಾಯಿತು.

ನೆನ್ನೆ ರಾಮನಾಥಪುರದ ಎರಡು ತಂಬಾಕು ಮಾರುಕಟ್ಟೆಗಳಲ್ಲಿ ಪ್ರಸಕ್ತ ಸಾಲಿನ ಬೆಳೆಗಾರರ ಬಹು ನಿರೀಕ್ಷಿತ ಹೊಗೆಸೊಪ್ಪು ಹರಾಜು ಪ್ರಕ್ರಿಯೆಗೆ ವಿದ್ಯುಕ್ತ ಚಾಲನೆ ದೊರೆಕಿತ್ತು. ಮೊದಲ ದಿನದ ಹರಾಜಿನಲ್ಲಿ ಗುಣಮಟ್ಟದ ಒಂದು ಕೆಜಿ ಹೊಗೆಸೊಪ್ಪು 185 ರೂಪಾಯಿಗೆ ಮಾರಾಟವಾಯಿತು. ಮಾರುಕಟ್ಟೆಯ ಪ್ಲಾಟ್ ಫಾರಂ 07 ಮತ್ತು 63ರಲ್ಲಿ ಹರಾಜು ಅಧೀಕ್ಷಕರಾದ ಸಿದ್ದರಾಮ ಡಾಂಗೆ, ಮಂಜುನಾಥ್ ಅವರ ಸಮ್ಮುಖದಲ್ಲಿ ತಂಬಾಕು ಬೇಲ್‌ಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ನಂತರ ಹರಾಜು ಪ್ರಕ್ರಿಯೆ ನಡೆಯಿತು.

ಆರಂಭದ ದಿನವಾದ ಕಾರಣ ಎರಡು ಮಾರುಕಟ್ಟೆಗೆ ಸೀಮಿತ ಸಂಖ್ಯೆಯಲ್ಲಿ ತಲಾ 18 ಬೇಲ್‌ಗಳು ಅವಕವಾಗಿದ್ದವು. ಪ್ಲಾಟ್ ಫಾರಂ 63ರಲ್ಲಿ ನಡೆದ ಇ- ಹರಾಜು ಪ್ರಕ್ರಿಯೆಯಲ್ಲಿ ಗುಣಮಟ್ಟದ ಒಂದು ಕೆಜಿ ಹೊಗೆಸೊಪ್ಪು 182ರಿಂದ 185 ರೂ ವರೆಗೆ ಬಿಡ್ ನಿಂತಿತು. ಹಳೆಯ ಪ್ಲಾಟ್ ಫಾರಂ 07ರಲ್ಲಿ ಗುಣಮಟ್ಟದ ಒಂದು ಕೆಜಿ ಹೊಗೆಸೊಪ್ಪು 183ರಿಂದ 185 ರೂಪಾಯಿಗೆ ಖರೀದಿಸಲಾಯಿತು.
ಮಾಜಿ ಸಚಿವ ಎ. ಮಂಜು ಹರಾಜು ಪ್ರಕ್ರಿಯೆ ವೀಕ್ಷಿಸಿ, ಕೋವಿಡ್ ಸಂಕಷ್ಟದ ಕಾಲದಲ್ಲಿ ರೈತರು ಅಪಾರ ಹಣ ವ್ಯಯಿಸಿ ತಂಬಾಕು ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ದರ ನೀಡಿ ಬೆಳೆಗಾರರಿಗೆ ಆರ್ಥಿಕವಾಗಿ ಲಾಭವಾಗುವ ನಿಟ್ಟಿನಲ್ಲಿ ಹರಾಜು ಪ್ರಕ್ರಿಯೆ ಕೈಗೊಳ್ಳಬೇಕು ಎಂದು ವರ್ತಕರಿಗೆ ಮನವಿ ಮಾಡಿದರು.

ಪ್ರಾರಂಭದ ದಿನವಾದ ಕಾರಣ ಬೆಲೆ ತಿಳಿಯುವ ಉದ್ದೇಶದಿಂದ ಎರಡು ಮಾರುಕಟ್ಟೆಗಳಲ್ಲಿ ಅಪಾರ ರೈತರು ಜಮಾಯಿಸಿದ್ದು, ಇ ಹರಾಜಿನ ಟಿವಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಪ್ರತಿ ಬೇಲ್‌ಗಳ ದರದ ಮೊತ್ತಗಳನ್ನು ಕುತೂಹಲದಿಂದ ವೀಕ್ಷಿಸಿದರು.
ಇಂದು‌‌ ಎರಡನೇ ದಿನದ ಹರಾಜಿನಲ್ಲಿ‌ ಎರಡು ನೂರಕ್ಕೂ ಹೆಚ್ಚು ಬೇಲ್ ಗಳು ಬಂದಿದ್ದವು.

Post a Comment

0 Comments