ಅರಕಲಗೂಡು: ನಾಯಕ್ವತದ ಗುಣ ಬೆಳೆಸುವ ಮುಖೇನ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ ಎಂದು ಎನ್ನೆಸ್ಸೆಸ್ಸ್ ವಿಭಾಗೀಯ ಅಧಿಕಾರಿ ಎಂ.ಆರ್. ಹರೀಶ್ ತಿಳಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಂಧೀಜಿಯವರ ಕನಸಿನ ಕೂಸಾದ ಈ ಸೇವಾ ಯೋಜನೆ ಗ್ರಾಮೀಣ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಂದಿದೆ. ಇದು ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವನೆ ಬೆಳೆಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಹಾಯಕವಾಗಿದೆ. ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಜೆಂದ್ರ ಕುಮಾರ್ ಜೈನ್ ಮಾತನಾಡಿ, ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಭಿವೃದ್ಧಿ ಸಮಿತಿ ಗಮನ ಹರಿಸಿದ್ದು, ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 420 ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಉತ್ತಮ ಸಾಧನೆಯಾಗಿದೆ ಎಂದರು.
ಉಪನ್ಯಾಸಕ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸದಸ್ಯರಾದ ಟಿ. ವಿಜಯ ಕುಮಾರ್, ಪೂನಾರಾಮ್, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಹೇಮಾವತಿ, ಉಪನ್ಯಾಸಕರಾದ ಚಂದ್ರಮೌಳಿ, ನಾಗೇಶ್ ಮೂರ್ತಿ, ಸಿದ್ದರಾಜು ಇತರರು ಇದ್ದರು.
0 Comments