ಶಿಕ್ಷಕನಿಂದ ನಿರ್ದೇಶಕ: ಶ್ರೀ ಮಹೇಶಗೌಡ ರಗಡ್ ನಿರ್ದೇಶಕ

ಹಳ್ಳಿಯಲ್ಲಿ ಬುಕ್ಕು ಹಿಡಿದು ಹಸಿರು ನೋಡಿ ತಲೆಗೆ ಹೊಳೆಯುತ್ತಿದ್ದ ಸಾಲುಗಳನ್ನು ಕವಿತೆ ರೂಪದಲ್ಲಿ ಗೀಜುತಿದ್ದ ಹಳ್ಳಿ ಹೈದನೊಬ್ಬ ಸ್ಯಾಂಡಲ್ ವುಡ್ ನ  ಬಹು ಬೇಡಿಕೆಯ ನಿರ್ದೇಶಕರಾಗಿ ಹುಬ್ಬು ಏರಿಸುವಂತೆ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿ ಬೆಳೆಯುವುದು ಸುಲಭದ ಕೆಲಸವಲ್ಲ. ಶುದ್ಧ ಹಳ್ಳಿ ಸೊಗಡಿನ ಪ್ರತಿಭೆ ಮಹೇಶ್ ಗೌಡ ಅವರು ,ದೈಹಿಕ ಶಿಕ್ಷಣದ ಶಿಕ್ಷಕರಿಂದ, ಸದಾಭಿರುಚಿಯ ನಿರ್ದೇಶಕನಾಗುವ ವರೆಗಿನ ಪಯಣ ಒಂತರಾ ರೋಮಾಂಚನ ಎನ್ನಬಹುದು.

ಯುವ ಉತ್ಸಾಯಿಗಳಿಗೆ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಗಡ್ ನಿರ್ದೇಶಕ ಶ್ರೀಮಹೇಶ್ ಗೌಡ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನೇನಹಳ್ಳಿಯವರು ಎನ್ನುವುದು ಮತ್ತೊಂದು ಹೈಲೈಟ್.


ಅಣ್ಣೇಗೌಡ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀ ಮಹೇಶ್ ಗೌಡ ಅವರದ್ದು ಚಿಕ್ಕವಯಸ್ಸಿನಿಂದಲೇ ಕ್ರಿಯಾತ್ಮಕವಾದ ಸ್ವಭಾವ. ಚಿಕ್ಕಂದಿನಿಂದಲೂ ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಯಾಗಿ ಬೆಳೆದ ಇವರು, ಅವರ ಚಿತ್ರಗಳನ್ನು ನೋಡುತ್ತಾ ಸಾಧನೆ ಮಾಡುವ ಛಲದಲ್ಲಿ ಬೆಳೆದವರು.

ಹುಟ್ಟಿದ ಊರಿನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ಪಿಯುಸಿ ಶಿಕ್ಷಣಕ್ಕೆ ಬಸವಾಪಟ್ಟಣ ಕಾಲೇಜಿಗೆ ಸೇರಿದರು. ಅಲ್ಲಿಂದ ಶುರುವಾಯಿತು ನೋಡಿ, ಇವರ ಸಿನಿಮಾದೊಳಗಿನ ಪಯಣ.


ಅಂದಿನಿಂದ ಸಿನಿಮಾ ನೋಡಿ ಬೆಳೆದಿದ್ದ ಇವರಿಗೆ, ತಮ್ಮ ನೆಚ್ಚಿನ ತಾರೆ ಅಂಬರೀಶ್ ಅವರಿಗೆ ಸಿನಿಮಾವೊಂದನ್ನು ನಿರ್ದೇಶಿಸಬೇಕು ಎನ್ನುವ ಮಹದಾಸೆ. ಅಷ್ಟೇ ಅಲ್ಲದೆ ತಮ್ಮ ಪುಸ್ತಕದಲ್ಲಿ ಪಾಠಗಳಿಗಿಂತ ಹೆಚ್ಚಾಗಿ ಕವನ ಕವಿತೆಗಳನ್ನು ಬರೆದಿದ್ದರು.

ತಮ್ಮ ಕವನ ಕವಿತೆಗಳನ್ನು ತಮ್ಮೊಂದಿಗೆ ಹೊತ್ತುದ್ಧ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೋಶಿಯಾಲಜಿ ಎಂಎ ಮುಗಿಸಿದರು.  ನಂತರ ತಮ್ಮ ಆರಾಧ್ಯ ದೈವ ಅಂಬರೀಶ್ ಅವರಿಗೆ ಸಿನಿಮಾ ಮಾಡಲು ಹೊರಟ ಇವರಿಗೆ  ಸಿನಿಮಾರಂಗದ ಗಂಧಗಾಳಿಯೂ ಗೊತ್ತಿರದ ಚಿಗುರುಮೀಸೆ ಶ್ರೀ ಮಹೇಶ್ ಗೌಡ ಗಾಂಧಿನಗರಕ್ಕೆ ಕಾಲಿಟ್ಟಾಗ, ಮೊದಲಿಗೆ ನಿರಾಸೆಯ ರುಚಿಯನ್ನು ಕಾಣುವಂತಾಯಿತು.

ಯಾಕೆಂದರೆ ಮಹದಾಸೆಯೊಂದಿಗೆ ಬಂದಿದ್ದ ಇವರಿಗೆ ಮೇರು ನಟ ಅಂಬರೀಶ್ ಅವರಿಗೆ ಸಿನಿಮಾ ನಿರ್ದೇಶಿಸಲು ಸಾಧ್ಯವಾಗಿಲ್ಲ,  ಸಮುದ್ರಕ್ಕೆ ಇಳಿಯಬೇಕಾದರೆ ಅದಕ್ಕೂ ಮೊದಲು ಈಜು ಕಲಿಯಬೇಕು ಎಂದು ಮತ್ತೆ ಮೈಸೂರಿಗೆ ಹೊರಟ ಇವರು ಸಿನಿಮಾ ನಿರ್ದೇಶನದಲ್ಲಿ ಡಿಪ್ಲೋಮೋ ಪದವಿಯನ್ನು ಪಡೆದು ಯಶಸ್ವಿದರು..

ಹಿರಿಯರು ಹೇಳುವಂತೆ, ಕಲ್ಲು ತನಗೆ ಬೀಳುವ  ಪೆಟ್ಟ ನಾ ಪೆಟ್ಟು ಎಂದು ತಿಳಿದರೆ ಅದು ಎಂದಿಗೂ ಶಿಲೆ ಆಗುವುದಿಲ್ಲ, ಅದೇ ರೀತಿಯಾಗಿ  ಶ್ರೀ ಮಹೇಶ್ ಗೌಡ ಅವರಿಗೂ ಸಹ ಪ್ರಾರಂಭದಲ್ಲಿ ಅವಮಾನ ಹಸಿವು ಎಲ್ಲವನ್ನು ಅನುಭವಿಸ ಬೇಕಾಯಿತು.

ಆದರೂ ಕೂಡ ದೃತಿಗೆಡದೆ ಇದ್ದ ಸ್ವಲ್ಪವೇ ಹಣದಲ್ಲಿ, ಮನೆಯಿಂದ ನಿರ್ದೇಶಕರ ಆಫೀಸ್,  ಆಫೀಸ್ ನಿಂದ ಚಿತ್ರರಂಗದ ಸೆಟ್ ಗಳಿಗೆ ಅಲೆದಾಡಿದ್ದಾರು.  ಸಾಕಷ್ಟು ಬಾರಿ ಹಸಿವಿನಿಂದ ಕಿರುಚಾಡುತ್ತಿದ್ದ ಹೊಟ್ಟೆಗೆ, ಮುಂದಿನ ಉಜ್ವಲ ಭವಿಷ್ಯದ ಕನಸು ನನಸಾಗುವಂತಾಯಿತು .

ಅವರ ಈ ಹೋರಾಟಕ್ಕೆ ಪ್ರತಿಫಲ ಕೆಲವೇ ದಿನಗಳಲ್ಲಿ ಸಿಕ್ಕಿತ್ತು.

ಇಲ್ಲಿಯವರೆಗೆ ಬರೋಬ್ಬರಿ 30 ಸಿನಿಮಾಗಳಲ್ಲಿ  ಅಸಿಸ್ಟೆಂಟ್ ಮತ್ತು ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.

ಕನ್ನಡದ 20 ನಿರ್ದೇಶಕರೊಂದಿಗೆ ಅನುಭವ ಹೊಂದಿರುವ ಇವರು, ಮೇರು ನಿರ್ದೇಶಕರುಗಳಾದ ಯೋಗರಾಜ್ ಭಟ್, ಸಿಂಗೀತಂ ಶ್ರೀನಿವಾಸರಾವ್, ಕೆವಿ ರಾಜು, ಸಾಯಿಪ್ರಕಾಶ್, ಎ. ಹರ್ಷ, ಎಪಿ ಅರ್ಜುನ್, ದುನಿಯಾ ಸೂರಿ ಮುಂತಾದವರೊಂದಿಗೆ ಅನುಭವ ಪಡೆದು ಸೈ ಎನಿಸಿಕೊಂಡಿದ್ದಾರೆ.

ಸಿನಿಮಾ ರಂಗದಲ್ಲಿ ಇನ್ನೂ ಸಾಕಷ್ಟು ವರ್ಷಗಳೇ ಕಳೆದರೂ ಕೂಡ ನೆನಪಿಸಿಕೊಳ್ಳಬಹುದಾದ ಅಂತಹ ಎರಡು ಚಿತ್ರಗಳಾದ ದುನಿಯಾ ಮತ್ತು ಮುಂಗಾರುಮಳೆ ಚಿತ್ರಗಳಿಗೂ ಇವರು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಮುಂಗಾರು ಮಳೆಯಲ್ಲಿನ ಇವರ ಕೆಲಸವನ್ನು ಮೆಚ್ಚಿದ ಚಿತ್ರರಂಗ ಉತ್ತಮ ಸಹ ನಿರ್ದೇಶಕನೆಂದು ಕಾನ್ಫಿಡಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಚಿತ್ರರಂಗದಲ್ಲಿ ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್, ಶಂಕರನಾಗ್ ನಂತರದ ಸ್ಥಾನವನ್ನು ಪ್ರಸ್ತುತ ತುಂಬುತ್ತಿರುವುದು ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್.

ನಾನು ಬೆಳೆದು ತನ್ನವರನ್ನು ಬೆಳೆಸುವ ಗುಣಹೊಂದಿರುವ ದರ್ಶನ್ ಅವರಿಗೆ ಸಾಟಿ ಯಾರು ಹೇಳಿ..! ಅದರಂತೆ ಶ್ರೀ ಮಹೇಶ್ ಗೌಡ ಅವರ ಸಿನಿಮಾ ಪಯಣದ ಆರಂಭದಿಂದಲೂ ಜೊತೆಯಾಗಿರುವ ಕರ್ಣ ದರ್ಶನ್,  ಅವರು ಶ್ರೀ ಮಹೇಶ್ ಗೌಡ ಅವರ ಪ್ರತಿ ಹೆಜ್ಜೆಯಲ್ಲಿಯೂ ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ.

ದರ್ಶನ್ ರವರ ಸಿನಿಮಾಗಳಾದ  ಚಿಂಗಾರಿ,  ಬುಲ್ ಬುಲ್, ಜಗ್ಗು ದಾದಾ, ಚಕ್ರವರ್ತಿ ಹೀಗೆ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ತೊಡಗಿದರು. ದರ್ಶನ್ ರವರೆಗೂ ಕೂಡ ಅವರ ಕ್ರಿಯಾತ್ಮಕ ಕೆಲಸ ಬಹಳನೇ ಹಚ್ಚು ಮೆಚ್ಚು. ಹಾಗಾಗಿ ತಮ್ಮ ಮನೆಯ ಮಗನಂತೆ ಮಹೇಶ್ ಗೌಡ ರವರನ್ನು ನೋಡಿಕೊಳ್ಳುತ್ತಾರೆ. ಅವರ ಈ ಗುಣವನ್ನ ಮೆಚ್ಚುವ ಶ್ರೀ ಮಹೇಶ್ ಗೌಡ ಅವರು ದರ್ಶನ್ ಅವರನ್ನು ತಮ್ಮ ಸೋದರನಂತೆ ಭಾವಿಸುತ್ತಾರೆ.

ಮಹೇಶ್ ಗೌಡ ಅವರು ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮ ಕಲಾಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕು ಎನ್ನುವ ಅವರ ಹೆಬ್ಬಯಕೆಗೆ ರಗಡ್ ಚಿತ್ರ ಸಾಕ್ಷಿಯಾಯಿತು.

ಹಾಸನದ ಹೆಮ್ಮೆಯ ಮಹೇಶ್ ಗೌಡ ಅವರು ತಮ್ಮ ಚೊಚ್ಚಲ ಸಿನಿಮಾದಲ್ಲಿ ಹಾಸನದ ಹಿರಿಮೆ ಬೇಲೂರು, ಹಳೇಬೀಡು ದೇವಸ್ಥಾನವನ್ನು ಇದುವರೆಗೂ ಯಾರು ತೋರಿಸಿರದ ರೀತಿಯಲ್ಲಿ ಕಲಾಭಿಮಾನಿಗಳಿಗೆ ತೋರಿಸಿ ತೃಪ್ತಿಪಡಿಸಿದರು.

ನೈಜ ಘಟನೆ ಆಧಾರಿತ ಚಿತ್ರವಾಗಿದ್ದ ರಗಡ್ ಸಿನಿಮಾಗಾಗಿ ತಮ್ಮ ಸಾಕಷ್ಟು ಸಮಯವನ್ನು ಮುಡುಪಾಗಿಟ್ಟಿದ್ದರು. ಯಾವುದೇ ಚಿತ್ರವನ್ನು ಮಾಡಬೇಕಾದರೂ ಅದನ್ನು ಒಬ್ಬ ನಿರ್ದೇಶಕನಾಗಿ ನಾನು ನೋಡಿದಾಗ ನನಗೆ ಮೊದಲು ತೃಪ್ತಿಯಾಗಬೇಕು. ಆನಂತರವೇ ಪ್ರೇಕ್ಷಕ ಮಹಾಪ್ರಭುಗಳಿಗೆ ಹೆಮ್ಮೆಯಿಂದ ಧೈರ್ಯ ಮಾಡುತ್ತೇನೆ ಎನ್ನುವುದು ಅವರ ಮಾತು.

ಹಾಗಾಗಿ ರಗಡ್ ಸಿನಿಮಾಗಾಗಿ, ರಗಡ್ ಆಗಿ ಸಂಶೋಧನೆ ನಡೆಸಿ ಉತ್ತಮ ಸಂಭಾಷಣೆಯೊಂದಿಗೆ ಕಥಾಹಂದರವನ್ನು ರಚಿಸಿ, ಮರಿ ಟೈಗರ್ ವಿನೋದ್ ಪ್ರಭಾಕರ್ ರವರ ನಾಯಕತ್ವದೊಂದಿಗೆ ನಿರ್ದೇಶಕರ ಟೋಪಿಯನ್ನು ಮೊದಲ ಬಾರಿಗೆ ದರಿಸಿದರು.

ಆನಂತರ ಶುರುವಾಯಿತು ನೋಡಿ ಶ್ರೀ ಮಹೇಶ್ ಗೌಡ ಅವರ  ಜಲ್ವಾ.

ತಮ್ಮ ಚೊಚ್ಚಲ ನಿರ್ದೇಶನದ ರಗಡ್ ಸಿನಿಮಾದಲ್ಲಿ ಐದು ಹಾಡುಗಳನ್ನು ಕೂಡ ತಾವೇ ಬರದಿದ್ದರೂ. ವಿದ್ಯಾರ್ಥಿದೆಸೆಯಿಂದಲೇ ಕಾವ್ಯದ ಸೋಂಕು ತಗುಲಿದ ಕಾರಣ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು.

ಅದರಲ್ಲಂತೂ ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕು ಈ ಸಾಂಗ್‌ ತುಂಬಾ ಹಿಟ್ ಆಯಿತು. ಮತ್ತು  ಚಿತ್ರದ ಕೊನೆಯಲ್ಲಿ ನಾಯಕಿ ಸಾವನ್ನಪ್ಪಿದಾಗ ಬರುವ ಹಾಡಂತೂ, ಭಗ್ನ ಪ್ರೇಮಿಗಳ ನೆಚ್ಚಿನ ಹಾಡಾಗಿದೆ.

ರಗಡ್ ಮೂಲಕ ನಿರ್ದೇಶಕನಾಗಿ ಯಶಸ್ವಿಯಾದ ಶ್ರೀ ಮಹೇಶ್ ಗೌಡ ಅವರ ಮೊದಲ ಪ್ರಯತ್ನದಲ್ಲಿಯು ಕೂಡ ಕರುನಾಡ ದುರ್ಯೋಧನ ದರ್ಶನ್ ರವರು ಸಾಥ್ ನೀಡಿದರು.

ಶ್ರೀ ಮಹೇಶ್ ಗೌಡ ಮತ್ತು ವಿನೋದ್ ಪ್ರಭಾಕರ್ ರವರ ಕೆಲಸವನ್ನ ನೋಡಿ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದರು. ಶ್ರೀ ಮಹೇಶ್ ಗೌಡ ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಸಹ ಭವಿಷ್ಯವನ್ನು ನುಡಿದ್ದರು.

ದಾಸ ದರ್ಶನ್ ರವರ ಭವಿಷ್ಯದಂತೆ ಶ್ರೀ ಮಹೇಶ್ ಗೌಡ ಅವರು ಇಂದಿಗೆ ಯಶಸ್ವಿ ನಿರ್ದೇಶಕರಾಗಿದ್ದಾರೆ. ಮುಂಗಾರುಮಳೆ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ರವರೊಂದಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಶ್ರೀ ಮಹೇಶ್ ಗೌಡ ಅವರು ಇಂದು ತ್ರಿಬಲ್ ರೈಡಿಂಗ್ ಮೂಲಕ ಗಣೇಶ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮಹೇಶ್ ಗೌಡ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ  "ತ್ರಿಬಲ್ ರೈಡಿಂಗ್ " ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಅದಿತಿ ಪ್ರಭುದೇವ, ರಚನಾ ಇಂದರ್,  ಮೇಘ ಶೆಟ್ಟಿ, ನಟನೆಮಾಡುತ್ತಿದ್ದು,   ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರವಾಗಿರುವ " ತ್ರಿಬಲ್ ರೈಡಿಂಗ್ "  ನಿರ್ದೇಶಕ  ತಮ್ಮ ಮೊದಲ ಚಿತ್ರದ ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ನಿರೂಪಿಸಿರುವ ಮಹೇಶ್ ಗೌಡ ಅವರು ಎರಡನೇ ಸಿನಿಮಾ "ತ್ರಿಬಲ್ ರೈಡಿಂಗ್" ಮೂಲಕ ಮತ್ತೊಮ್ಮೆ ಗೆಲುವಿನ ನಗೆಯನ್ನು ಬೀರಲು ತಯಾರಾಗಿದ್ದಾರೆ.

ಇಲ್ಲಿಯೂ ಸಹ ತಮ್ಮ ಕಲಾ ಚಾತುರ್ಯತೆ ಯನ್ನ ಮೆರೆದಿರುವ ಶ್ರೀ ಮಹೇಶಗೌಡ ಅವರು ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಮೂರು ಹಾಡುಗಳನ್ನು ಬರೆದಿದ್ದಾರೆ. ಇವರೊಂದಿಗೆ ಚಂದನ್ ಶೆಟ್ಟಿ, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ರವರ  ಬರವಣಿಗೆಯ ಹಾಡುಗಳ ಸಹ ಚಿತ್ರದಲ್ಲಿದೆ.

ಕೆಲವು ದಿನಗಳ ಹಿಂದಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ "ತ್ರಿಬಲ್ ರೈಡಿಂಗ್" ಟೀಸರ್ ಬಿಡುಗಡೆಯಾಗಿತ್ತು. ಈ ಟೀಸರ್ ಗೋಲ್ಡನ್ ಸ್ಟಾರ್ ರವರ ಜನರ ಮನ ತಣಿಸುವ ಅಭಿನಯ ಮತ್ತು ನಿರ್ದೇಶಕ ಶ್ರೀ ಮಹೇಶ್ ಗೌಡರವರ ಸದಾಭಿರುಚಿಯ ನಿರ್ದೇಶನಕ್ಕೆ ಸಾಕ್ಷಿಯಾಗಿತ್ತು.

ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಯಾದ ಟೀಸರ್ ಕೆಲವೇ ಸಮಯದ ಅಂತರದಲ್ಲಿ ಜನ ಮೆಚ್ಚುಗೆ ಗಳಿಸಿ ಕೇವಲ 23 ಗಂಟೆಯಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆದು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ ಆಗಿತ್ತು. ಈ ಮೂಲಕ ತಾವು ಸಮರ್ಥ ನಿರ್ದೇಶಕ ಎನ್ನುವುದನ್ನ ಶ್ರೀ ಮಹೇಶ್ ಗೌಡ ಅವರು ಸಾಬೀತು ಮಾಡಿದರು.

2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಮಹೇಶ್ ಗೌಡ,  ಅವರಿಗೆ ವಿತ್ತ ಎನ್ನುವ ಬಾಳಸಂಗಾತಿ ಜೊತೆಯಾಗಿದ್ದಾರೆ. ಈ ದಂಪತಿಗಳಿಗೆ ಹಣತೆ ಹೆಸರಿನ ಮುದ್ದಾದ ಹೆಣ್ಣು ಮಗುವಿದೆ. ದಂಪತಿಗಳ ಬಾಳಿಗೆ ಹೆಸರಿನಂತೆ ಮುದ್ದು ಮಗಳು ಹಣತೆ ಬೆಳಕಾಗಿದ್ದಾರೆ.

ಒಟ್ಟಿನಲ್ಲಿ ಹಾಸನದ ಹೆಮ್ಮೆಯ ನಿರ್ದೇಶಕರಾಗಿರುವ ಶ್ರೀ ಮಹೇಶ್ ಗೌಡ ಅವರು ಇದೇ ರೀತಿಯಾಗಿ ತಮ್ಮ ಕಲಾಸೇವೆಯನ್ನು ಮುಂದುವರಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಆಕಾಶದೆತ್ತರಕ್ಕೆ ಏರಿ ಮೇರು ನಿರ್ದೇಶಕರ ಸಾಲಿನಲ್ಲಿ ನಿಲ್ಲಲಿ ಎನ್ನುವುದೇ ನಮ್ಮ ಆಶಯ.....


                ವಿಷೇಶ ವರದಿ : ರವಿಕುಮಾರ್ ದುಮ್ಮಿ

Post a Comment

0 Comments