ಅರಕಲಗೂಡು: ತಾಲೂಕು ಆಡಳಿತ ಗುರುತಿಸಿರುವ ಜಮೀನನ್ನು ಜೀತ ವಿಮುಕ್ತರು ಒಪ್ಪಿದರೆ ಕಾನೂನು ಪ್ರಕಾರ ಭೂಮಿ ನೀಡಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಎ.ಟಿ. ರಾಮಸ್ವಾಮಿ ಭರವಸೆ ನೀಡಿದರು.
ರಾಮನಾಥಪುರ ಹೋಬಳಿ ಗಂಗೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಶನಿವಾರ ಜೀತ ವಿಮುಕ್ತರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದ ಅವರು, 2006- 07 ರಲ್ಲಿ ನಾನು ಶಾಸಕನಾಗಿದ್ದಾಗ ತಾಲೂಕಿನ 4 ಗ್ರಾಮಗಳ ವ್ಯಾಪ್ತಿಯಲ್ಲಿ ಜೀತ ವಿಮುಕ್ತ ಹಲವಾರು ಕುಟುಂಬಗಳಿಗೆ ತಲಾ 2 ಎಕರೆ ಜಮೀನು ಮಂಜೂರು ಮಾಡಿಸಿ ಸಾಗುವಳಿ ಚೀಟಿಯನ್ನು ವಿತರಿಸಲು ಅರಕಲಗೂಡಿನಲ್ಲಿ ಕಾರ್ಯಕ್ರಮ ಏರ್ಪಾಡು ಮಾಡಿಕೊಂಡು ಕಾಯುತ್ತಿರುವ ಸಂದರ್ಭ ರಾಜಕೀಯ ಎದುರಾಳಿಗಳು ಹೇಳಿದ ಸುಳ್ಳನ್ನು ನಂಬಿ, ಸಾಗುವಳಿ ಚೀಟಿಯನ್ನು ಪಡೆಯದೆ ತಿರಸ್ಕಾರ ಮಾಡಿದಿರಿ. ಅವರ ಮಾತನ್ನು ನಂಬಿದ ನಿಮಗೆ ಇದುವರೆಗೂ ಭೂಮಿಯೂ ಸಿಗಲಿಲ್ಲ, ನೀವು ಹೋರಾಟ ಮಾಡುವುದು ತಪ್ಪಿಲ್ಲ ಎಂದು ಅಸಮಧಾನ ಹೊರಹಾಕಿದರು.
ಗಂಗೂರು ಸಮೀಪದಲ್ಲಿರುವ ಗೊಬ್ಬಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಜಮೀನು ನೀಡುವಂತೆ ನೀವು ಹೋರಾಟ ಮಾಡುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಮೀಸಲು ಅರಣ್ಯ ಪ್ರದೇಶವನ್ನು ಬಿಟ್ಟುಕೊಡುವಂತಿಲ್ಲ. ಈ ವಿಷಯದಲ್ಲಿ ಮತಗಳಿಕೆಯ ಉದ್ದೇಶದಿಂದ ನಿಮಗೆ ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸವನ್ನು ನಾನು ಮಾಡುವುದಿಲ್ಲ. ಈ ಕುರಿತು ನಿರ್ಧರಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾದಲ್ಲಿ ನಿಮಗೆ ಭೂಮಿ ಕೊಡಿಸುವ ಕೆಲಸವನ್ನು ನಾನು ಕೈಗೆತ್ತಿಕೊಳ್ಳುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಜೀತ ವಿಮುಕ್ತ ಕುಟುಂಬಗಳ ಸದಸ್ಯರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಕೃಷ್ಣಯ್ಯ, ಸದಸ್ಯ ಶಿವೇಗೌಡ, ಟಿ. ರಾಮೇಗೌಡ, ಅನಿತಾ, ಮಂಗಳಮ್ಮ, ಕನಕಾಮಣಿ, ಪಿಡಿಒ ರವಿ, ತಾ.ಪಂ ಇಒ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜು ಮುಂತಾದವರು ಉಪಸ್ಥಿತರಿದ್ದರು.
0 Comments