ಅರಕಲಗೂಡು: ರಾಜ್ಯದಲ್ಲಿ ೨೦೨೩ರ ವಿಧಾನಸಭಾ ಚುನಾವಣಾ ವೇಳೆಗೆ ಕಾಂಗ್ರೆಸ್ ಹೈಕಮಾಂಡ್ ದಲಿತ ಮುಖ್ಯಮಂತ್ರಿ ಘೋಷಣೆ ಮಾಡಬೇಕು. ಇಲ್ಲವಾದರೆ ಸಮುದಾಯದ ಜನತೆ ಪಕ್ಷಕ್ಕೆ ಮತ ಹಾಕದಂತೆ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ದಲಿತ ಮುಖಂಡ ಹಾಗೂ ರಾಮನಾಥಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭಾಕರ್ ತಿಳಿಸಿದ್ದಾರೆ.
ಕಳೆದ ೭೦ ವರ್ಷಗಳಿಂದ ರಾಜ್ಯದಲ್ಲಿ ಪ್ರಬಲ ಸಮುದಾಯವಾದ ದಲಿತರು ಕಾಂಗ್ರೆಸ್ ಪಕ್ಷವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಬೆಂಬಲಿಸುತ್ತಾ ಬಂದಿದ್ದಾರೆ. ಇದರ ಫಲವಾಗಿ ಎಲ್ಲ ಕೋಮಿನ ಜನರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಸಾಧ್ಯವಾಗಿದೆ. ದುರಾದೃಷ್ಟವಶಾತ್ ಪಕ್ಷದ ಓಟ್ ಬ್ಯಾಂಕ್ ಆದ ದಲಿತ ಸಮುದಯಕ್ಕೆ ಸೇರಿದ ಯಾರೊಬ್ಬರೂ ಮುಖ್ಯಮಂತ್ರಿ ಹುದ್ದೆಗೇರಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೆ ತದನಂತರ ದಲಿತ ಸಮುದಾಯದ ರಾಜಕೀಯ ಮುಖಂಡರಿಗೆ ಅನ್ಯಾಯವೆಸಗುವ ಪ್ರವೃತ್ತಿ ಮುಂದುವರೆಸಿಕೊAಡು ಬಂದಿದೆ. ಪರಿಣಾಮವಾಗಿ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿರುವ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ಮುಂತಾದ ನಾಯಕರು ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಈ ಬೆಳವಣಿಗೆ ನಿಜಕ್ಕೂ ನಮ್ಮ ಸಮುದಾಯದ ಜನತೆಗೆ ನೋವು ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಚುನಾವಣೆಗೂ ಮುನ್ನವೇ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಕಿತ್ತಾಟ ಶುರುವಾಗಿದೆ. ಪಕ್ಷದಲ್ಲಿ ಒಂದು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದವರು ಮತ್ತೆ ಪ್ರಯತ್ನ ಪಡುವುದು ತರವಲ್ಲ. ದಲಿತ ಮುಖ್ಯಮಂತ್ರಿ ಘೋಷಣೆ ಮಾಡದಿದ್ದರೆ ಕಾಂಗ್ರೆಸ್ ವಿರುದ್ದವಾಗಿ ಚಳವಳಿಯ ಹಾದಿ ತುಳಿಯುವುದು ಅನಿವಾರ್ಯವಾಗಲಿದೆ ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
- ಸಂಪಾದಕ - ರವಿ
0 Comments