ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮ ತಡೆಗಟ್ಟಿ ಕೋವಿಡ್ ನಿಂದ ಮಕ್ಕಳನ್ನು ರಕ್ಷಿಸಿ

ಅರಕಲಗೂಡು: ಕೋವಿಡ್- ೧೯ ಹಿನ್ನಲೆಯಲ್ಲಿ ಎಲ್ಲ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸ್ ಸಿಂಪಡಿಸಿ ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ಮೂಲಕ ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎ.ಟಿ. ರಾಮಸ್ವಾಮಿ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಮತ್ತು ಪ್ರಶ್ನೆ ಪತ್ರಿಕೆ ಮೇಲ್ವಿಚಾರಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ ಕೇರ್ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತರನ್ನು ನೇಮಿಸಬೇಕು. ಒಂದು ಅಂಬುಲೆನ್ಸ್ ಕಾಯ್ದಿರಿಸಬೇಕು. ಕೆ.ಎಸ್.ಆರ್.ಟಿ.ಟಿ. ಬಸ್‌ಗಳು ಸಂಚರಿಸುವAತೆ ಡಿಪೋ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಆರು ಮಾರ್ಗಗಳಲ್ಲಿ ಸಂಚರಿಸುವ ವಾಹನಗಳಿಗೆ ಸೂಕ್ತ ಭದ್ರತೆಗಾಗಿ ಹಾಗೂ ಪರೀಕ್ಷಾ ಕೇಂದ್ರಗಳಿಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಕೇಂದ್ರ ತೆರೆದು ಕಾರ್ಯಕರ್ತರನ್ನು ನಿಯೋಜಿಸಬೇಕು. ಬಳಸಿ ಬಿಸಾಡುವ ಲೋಟದಲ್ಲಿ ಮಕ್ಕಳಿಗೆ ಕುಡಿಯಲು ನೀರು ನೀಡಬೇಕು. ಸುತ್ತೋಲೆಗಳನ್ವಯ ಎಲ್ಲ ಸ್ಥರದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ ಮಾತನಾಡಿ, ಪರೀಕ್ಷಾ ಕೇಂದ್ರದ ಎಲ್ಲ ಸಿಬ್ಬಂದಿಗಳು ಕೋವಿಡ್ ಚುಚ್ಚುಮದ್ದು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಒಂದೊAದು ಅಂಬುಲೆನ್ಸ್ ಅನ್ನು ಎರೆಡೆರಡು ಕೇಂದ್ರಗಳಿಗೆ ನಿಯೋಜಿಸಲಾಗುವುದು. ಯಾವುದೇ ಸಮಸ್ಯೆಗಳು ಎದುರಾದರೆ ತುರ್ತು ಕರೆ ಮಾಡುವಂತೆ ತಿಳಿಸಿದರು.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಪರೀಷ್ಕೃತ ವೇಳಾಪಟ್ಟಿ ಹಾಗೂ ಎಲ್ಲ ಸಿಬ್ಬಂದಿಗಳ ಜವಾಬ್ದಾರಿಗಳ ಮಾರ್ಗಸೂಚಿಯನ್ನು ಸಭೆಗೆ ಓದಿ ತಿಳಿಸಲಾಯಿತು.

ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ತಾಪಂ ಇಒ ಎನ್. ರವಿಕುಮಾರ್, ಸಿಪಿಐ ಸತ್ಯನಾರಾಯಣ, ಬಿಇಒ ಎಚ್.ಕೆ. ಮನಮೋಹನ್, ತಾಲೂಕು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡೆಲ್ ಅಧಿಕಾರಿ ಶ್ರೀನಿವಾಸ್, ಶಿವರಾಜ್ ಉಪಸ್ಥಿತರಿದ್ದರು.

                      - ಸಂಪಾದಕ - ರವಿ

Post a Comment

0 Comments