ಅರಕಲಗೂಡು: ಕಕ್ಷಿದಾರರು ಲೋಕ್ ಅದಾಲತ್ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಲು ಉತ್ತಮ ವೇದಿಕೆಯಾಗಿದ್ದು, ಜನರು ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಕಕ್ಷೀದಾರರ ಬದುಕಿಗೆ ನೆಮ್ಮದಿ ಕಂಡುಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮುಜಾಫರ್ ತಿಳಿಸಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಕ್ಷೀದಾರರಿಗೆ ನ್ಯಾಯಾಲಯಗಳಲ್ಲಿ ತನ್ನ ಅಭಿಪ್ರಾಯವನ್ನು ನೇರವಾಗಿ ನ್ಯಾಯಾಲಯಕ್ಕೆ ತಿಳಿಸಲು ಅವಕಾಶವಿರುವುದಿಲ್ಲ. ಅದಕ್ಕೆ ನ್ಯಾಯವಾದಿಗಳನ್ನು ಅವಲಂಭಿಸುವುದು ಅನಿವಾರ್ಯ. ಆದರೆ ಲೋಕ್ ಅದಾಲತ್ ಗಳಲ್ಲಿ ಕಕ್ಷೀದಾರರು ನೇರ ತನ್ನ ಅಭಿಪ್ರಾಯ ಹಂಚಿಕೊಳ್ಳವ ಅವಕಾವಿದೆ. ಇದರ ಅವಕಾಶ ಸದುಪಯೋಗಪಡಿಸಿಕೊಂಡು ಹಲವಾರು ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಆಗಸ್ಟ್ 14ರಂದು ಲೋಕ್ ಅದಾಲತ್ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಡೆಯಲಿದೆ. ವಿವಾಹ ವಿಚ್ಚೇದನ ಹೊರತು ಪಡಿಸಿ ಕೌಟುಂಬಿಕ ವ್ಯಾಜ್ಯಗಳು, ಹಣಕಾಸು ಸಂಸ್ಥೆಗಳೊಂದಿಗೆ ಇರುವ ವ್ಯಾಜ್ಯಗಳನ್ನೂ ಇತ್ಯರ್ಥಪಡಿಸಲು ಅವಕಾಶವಿದೆ. ಕಕ್ಷೀದಾರರು ಸ್ವಯಂ ಪ್ರೇರಿತರಾಗಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದೇ ಹೊರತು, ಯಾರಿಗೂ ಒತ್ತಡವಿಲ್ಲ. ಈ ನಿಟ್ಟಿನಲ್ಲಿ ಕಕ್ಷೀದಾರರ ತೀರ್ಮಾನವೇ ಅಂತಿಮ. ಲೋಕ್ ಅದಾಲತ್ ಮೂಲಕ ಪ್ರಕರಣ ಇತ್ಯರ್ಥಗೊಳ್ಳುವದರಿಂದ ಕಕ್ಷೀದಾರರಿಗೆ ಸಮಯ, ಹಣ ಉಳಿಯುವ ಜತೆಗೆ ನೆಮ್ಮದಿಯ ಬದುಕಿಗೆ ದಾರಿಯಾಗಲಿದೆ ಎಂದು ಹೇಳಿದರು.
ಕೋವಿಡ್ ಕಾರಣದಿಂದ ಲಾಕ್‌ಡೌನ್ ಏರ್ಪಟ್ಟ ನಂತರ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿಯಾಗಿವೆ. ಕಳೆದ ಮಾರ್ಚ್ 1ರ ವೇಳೆಗೆ 6612 ಪ್ರಕರಣಗಳು ಬಾಕಿ ಉಳಿದಿದೆ. ಕಳೆದ ಲೋಕ್ ಅದಾಲತ್ ನಲ್ಲಿ 942 ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದು 492 ಪ್ರಕರಣಗಳು ಇತ್ಯರ್ಥ ಗೊಂಡಿವೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಹರೀಶ್ ಅವರು ಮಾತನಾಡಿ, ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳುವ ಪ್ರಕರಣಗಳಿಗಿಂತಲೂ ಲೋಕ್ ಅದಾಲತ್ ಮೂಲಕ ಇತ್ಯರ್ಥಗೊಳ್ಳುವ ಪ್ರಕರಣಗಳಲ್ಲಿ ವ್ಯಾಜ್ಯವೂ ಇತ್ಯರ್ಥಗೊಂಡು ಸಂಬAಧಗಳೂ ಗಟ್ಟಿಯಾಗಿ ಉಳಿದು ಪರಸ್ಪರ ಸಾಮರಸ್ಯದಿಂದ ಕೂಡಿರಲು ಅವಕಾಶವಿದೆ. ರಾಜಿ ಸಂಧಾನಗಳು ದೈಹಿಕ, ಮಾನಸಿಕವಾಗಿಯೂ ಸಹಕಾರಿಯಾಗಲಿದೆ. ಈ ವೇಳೆ ಪೂರ್ವ ವ್ಯಾಜ್ಯಗಳನ್ನೂ ಸಂಧಾನಗಳ ಮೂಲಕ ಇತ್ಯರ್ಥಗೊಳಿಸಲು ಅವಕಾಶವಿದ್ದು, ಸಾರ್ವಜನಿಕರು ಕಾನೂನಿನ ಅರಿವಿನೊಂದಿಗೆ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಿ ಎಂದು ಹೇಳಿದರು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಾನೂನು ಸೇವಾ ಸಮಿತಿಯ 8867615079 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸಂಪಾದಕ - ರವಿ
0 Comments