ಅರಕಲಗೂಡು: ಪ್ರಸಿದ್ಧ ಶ್ರೀ ಅರಸೀಕಟ್ಟೆ ಅಮ್ಮ ದೇವಸ್ಥಾನದಲ್ಲಿ ಪರಿಸರ ಸ್ನೇಹಿಯಾಗಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಧಾರ್ಮಿಕವಾಗಿ ಭಕ್ತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿರುವುದು ಮೆಚ್ಚುಗೆಯ ಸಂಗತಿ ಎಂದು ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮನ್ಮೂಲ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಶ್ಲಾಘಿಸಿದರು.
ತಾಲೂಕಿನ ಶ್ರೀ ಅರಸೀಕಟ್ಟೆ ಅಮ್ಮ ದೇವಸ್ಥಾನ ಎದುರು ವಕೀಲ ಜನಾರ್ಧನ ಗುಪ್ತ ಅವರು ಕೊಡುಗೆ ನೀಡಿದ 201 ಕೆಜಿ ತೂಕದ ಬೃಹತ್ ಪಂಚಲೋಹ ಗಂಟೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸ್ವಚ್ಚತೆಯಿಲ್ಲದೆ ಅವ್ಯವಸ್ಥೆಯ ಆಗರವಾಗಿದ್ದ ಸುಕ್ಷೇತ್ರಕ್ಕೆ ಪ್ರತಿನಿತ್ಯ ಬರುವ ಸಾವಿರಾರು ಭಕ್ತರಿಗೆ ತೊಂದರೆಯಾಗಿತ್ತು. ಇದನ್ನು ಮನಗಂಡು ಶಾಸಕರು ಭಕ್ತರಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ಜತೆಗೆ ಪರಿಸರ ಸ್ನೇಹಿಯಾಗಿ ಅಭಿವೃದ್ದಿಗೊಳಿಸಿದ್ದಾರೆ. ಇಷ್ಟೇ ಏಕೆ ಕಾಡು ಗುಡ್ಡಗಳ ನಡುವಿನ ಪರಿಸರದಲ್ಲಿರುವ ಪುರಾತನ ದೇವಾಲಯದ ಕ್ಷೇತ್ರವನ್ನು ಸುಂದರ ತಾಣವನ್ನಾಗಿಸಿರುವುದು ಮೆಚ್ಚುಗೆಯ ವಿಚಾರವಾಗಿದೆ ಎಂದರು.
ದೇವಾಲಯದ ಪಕ್ಕದಲ್ಲಿನ ಕೆರೆಯ ನಡುಗಡ್ಡೆಯಲ್ಲಿ ಕಾವೇರಿ ದೇವಿಯ ವಿಗ್ರವನ್ನು ಪ್ರತಿಷ್ಠಾಪಿಸಿ ಅದರ ಸುತ್ತ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ವಿವಿಧ ದಾರ್ಶನಿಕರು ವಿಗ್ರಹಗಳನ್ನು ಸ್ಥಾಪಿಸಲು ಕಾರ್ಯಾರಂಭ ಮಾಡಿರುವುದು ಸಾಮರಸ್ಯ ಕಾಪಾಡುವ ಕುರಿತು ಶಾಸಕರು ಅತ್ಯುತ್ತಮ ಆಲೋಚನೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಅರಸೀಕಟ್ಟೆಯಮ್ಮನವರ ಕ್ಷೇತ್ರವನ್ನು ಶುದ್ಧ ಮತ್ತು ಪವಿತ್ರವಾಗಿಸಲು ವಿವಿಧ ಇಲಾಖೆಗಳು, ದಾನಿಗಳು ಮತ್ತು ಭಕ್ತರ ಸಹಕಾರದಿಂದ ಸ್ವಚ್ಚವಾಗಿಡುವ ಜತೆಗೆ ಪ್ರವಾಸಿ ತಾಣವಾಗಿ ರೂಪಿಸಲು ದೊಡ್ಡ ಪ್ರಯತ್ನ ಮಾಡಲಾಗಿದೆ.
ಶ್ರೀಕ್ಷೇತ್ರದಲ್ಲಿ 6 ಕೋಟಿ ರೂ ವೆಚ್ಚದಲ್ಲಿ ಭಕ್ತರಿಗಾಗಿ ವ್ಯವಸ್ಥಿತ ಅಡುಗೆ ಮನೆಗಳು, ಬಲಿಪೀಠ, ಸೋಪಾನಕಟ್ಟೆ, ಎಡೆಪೀಠ, ದೇವಾಲಯದ ಪುನರ್ ನಿರ್ಮಾಣ, ಭಕ್ತರು ಸಾಲಾಗಿ ಸಾಗಲು ನೆರಳು ಮತ್ತು ಬ್ಯಾರಿಕೇಡ್,್ರ ಸಾಲು ಅಂಗಡಿ ಮಳಿಗೆಗಳು, ಮಿನಿಹಾಲ್‌ಗಳು, ಕಾಟೇಜ್‌ಗಳು, ಹೈಟೆಕ್ ಶೌಚಗೃಹಗಳು, ಕೆರೆಯಲ್ಲಿ ದೋಣಿವಿಹಾರ ಕೇಂದ್ರ, ಪರಗೋಲ, ನಕ್ಷತ್ರವನ, ನವಗ್ರಹ ವನಗಳನ್ನು ನಿರ್ಮಿಸಲಾಗಿದೆ. ಇದೀಗ 201 ಕೆಜಿ ತೂಕದ ಪೂಜೆ ಗಂಟೆ ಸೇರ್ಪಡೆಯಾಗಿದೆ. ನಂದಿನಿ ಕ್ಷೀರ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.
ಗಂಟೆಯನ್ನು ಕೊಡುಗೆಯಾಗಿ ನೀಡಿದ ವಕೀಲ ಜನಾರ್ಧನ ಗುಪ್ತ ದಂಪತಿಗಳನ್ನು ಸನ್ಮಾನಿಸಲಾಯಿತು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ. ರಂಗಸ್ವಾಮಿ, ಕೊಣನೂರು ಗ್ರಾಪಂ ಅಧ್ಯಕ್ಷ ಕೆ.ಬಿ. ರಮೇಶ್, ಮುಖಂಡರಾದ ರವಿಕುಮಾರ್, ವೆಂಕಟೇಶ್, ಕೃಷೇಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು, ದೇವಾಲಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
-ಸಂಪಾದಕ - ರವಿ
0 Comments