ಮೇಕೆ ಹೋತ ಹೊತ್ತೊಯ್ದು ಸೆರೆಸಿಕ್ಕ ಕಳ್ಳರು

ಅರಕಲಗೂಡು: ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಮೇಕೆ ಹೋತ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಣನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನದ ಹುಣಸಿನಕೆರೆ ಬೀದಿ ವಲ್ಲಬಾಯಿ ರಸ್ತೆ ನಿವಾಸಿ ಆಟೋ ಚಾಲಕ ನಂದೀಶ (36) ಹಾಗೂ ಅರಕಲಗೂಡು ತಾಲೂಕು ಕಾರಹಳ್ಳಿಕೊಪ್ಪಲು ಗ್ರಾಮದ ಕಾಂತರಾಜ (32) ಬಂಧಿತ ಕಳ್ಳರು.

ಹೊನ್ನೇನಹಳ್ಳಿ ಗ್ರಾಮದಲ್ಲಿ ಜುಲೈ 6ರಂದು ಜಯಂತಿ ಎಂಬುವರು ತಮ್ಮ ತೋಟದ ಬಳಿ ಮೇಕೆ ಮೇಯಲು ಬಿಟ್ಟು ಜಮೀನು ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರು ಕಳ್ಳರು ಹೆಲ್ಮೇಟ್ ಧರಿಸಿ ಬೈಕ್‌ನಲ್ಲಿ ಬಂದು 18 ಸಾವಿರ ರೂ ಬೆಲೆ ಬಾಳುವ ಹೋತ ಕದ್ದು ಪರಾರಿಯಾದ್ದಾರೆ ಎಂದು ಜಯಂತಿ ಪುತ್ರ ಧರ್ಮೇಗೌಡ ಜುಲೈ 7ರಂದು ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕೇರಳಾಪುರ ಬಳಿ ಬೂದನೂರು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡು ಇಬ್ಬರು ಮೇಕೆ ಮಾರಾಟ ಮಾಡುವಾಗಿ ಸಿಕ್ಕಿಬಿದ್ದಿದ್ದಾರೆ. ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಿದಾಗಿ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ.

ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ನಂದೀಶ ಈ ಹಿಂದೆ ಚಿನ್ನದ ಸರ ಕಳ್ಳತನ ಮತ್ತು ಸಾಮಾನ್ಯ ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದಾನೆ. ಮತ್ತೊಬ್ಬ ಆರೋಪಿ ಕಾಂತರಾಜ ಕೊಲೆ ಪ್ರಕರಣದ ಆರೋಪಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


                              -ಸಂಪಾದಕ - ರವಿ

Post a Comment

0 Comments