ಅರಕಲಗೂಡು: ಸರ್ಕಾರ ರೈತರಿಗೆ ಹೆಚ್ಚಿನ ಸವಲತ್ತುಗಳನ್ನು ತಲುಪಿಸಿ ಕೃಷಿ ಕ್ಷೇತ್ರದ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವ ಮುಖೇನ ಲಾಭದಾಯಕ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕಿದೆ ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಹೇಳಿದರು.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಕೃಷಿ ಸಂಬAಧಿತ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಅಭಿಯಾನ ಜಾಗೃತಿ ರಥಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ರೈತರೇ ದೇಶದ ಬೆನ್ನೆಲುಬು ಎಂದು ಪಠಿಸುತ್ತಾ ವ್ಯರ್ಥ ಕಾಲಾಹರಣ ಮಾಡದೆ ಸರ್ಕಾರ ಕೃಷಿ ಕ್ಷೇತ್ರದಲ್ಲಿನ ಶಾಶ್ವತ ಸಮಸ್ಯೆಗಳನ್ನು ಬಗೆಹರಿಸಿ ಮಹತ್ತಾರವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಿ ಅನ್ನದಾತರ ಕಣ್ಣೀರೊರೆಸಬೇಕಿದೆ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿಯನ್ನು ನಂಬಿದ ರೈತ ಕುಟುಂಬಗಳು ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿದ್ದು ಇವರನ್ನು ಮೇಲೆತ್ತುವ ಕೆಲಸ ಮಾಡದ ಹೊರತು ಅನ್ನದಾತರ ದೇಶ ಎಂದಿಗೂ ಅಭಿವೃದ್ಧಿ ಹೊಂದಲು ಅಸಾಧ್ಯ ಎಂದರು.
ಅರೆಮಲೆನಾಡು ಹೋಬಳಿಯಾದ ಮಲ್ಲಿಪಟ್ಟಣ ಭಾಗದ ರೈತರಿಗೆ ಕೃಷಿಯೇ ಜೀವಾಳವಾಗಿದೆ. ಕೂಲಿ ಕಾರ್ಮಿಕರ ಕೊರತೆ ಹಾಗೂ ಕಾಡಾನೆಗಳ ಉಪಟಳ ಎದುರಿಸಿ ಬೆಳೆ ಬೆಳೆಯಬೇಕಿದೆ. ರೈತರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೃಷಿ ಜಾಗೃತಿ ರಥ ಪ್ರತಿ ಹಳ್ಳಿಗಳಲ್ಲೂ ಸಂಚರಿಸಿ ಸೂಕ್ತ ಮಾಹಿತಿ ಒದಗಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಮಾಗೋಡು ಬಸವರಾಜು, ಕೃಷ್ಣರಾಜು, ವಿವಿಧ ಕೃಷಿ ಇಲಾಖೆಗಳ ಸಿಬ್ಬಂದಿ ಹಾಜರಿದ್ದರು.
-ಸಂಪಾದಕ - ರವಿ
0 Comments