ಅರಕಲಗೂಡು: ಜನಸಂಖ್ಯೆ ಹೆಚ್ಚಳ ಕಡಿವಾಣ ಹಾಕುವ ಜತೆಗೆ ಪ್ರಾಕೃತಿಕ ವಿಕೋಪಗಳನ್ನು ನಿಯಂತ್ರಿಸಲು ಸರ್ಕಾರ ಯೋಜನೆಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ಪಟ್ಟಣದ ಶಿಕ್ಷಕರ ಭವನದ ಬಳಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಸೋಮವಾರ ಜನಸಂಖ್ಯೆ ಸ್ಫೋಟ ತಡೆಗಟ್ಟಲು ಜಾಗೃತಿ ಅಭಿಯಾನ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಪತ್ತಿನಲ್ಲಿಯೂ ಕುಟುಂಬ ಯೋಜನೆ ಸೇವೆ ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದಿ ಎಂಬ ಘೋಷಣೆಯೊಂದಿಗೆ ಇಲಾಖೆ ಜನಸಂಖ್ಯೆ ಸ್ಫೋಟ ತಡೆಯಲು ವಿನೂತನ ಜಾಗೃತಿ ಅಭಿಯಾನಕ್ಕೆ ಮುಂದಾಗಿದೆ. ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶ ಭಾರತ. ದಿನೇ ದಿನೇ ಜನಸಂಖ್ಯೆ ಅಧಿಕವಾಗುತ್ತಿದ್ದು ಪ್ರಕೃತಿ ವಿಕೋಪದಿಂದ ಭೂಮಿ ವಿಸ್ತೀರ್ಣ ಕಡಿಮೆಯಾಗುತ್ತಿರುವುದು ಆತಂಕರಿಯಾಗಿದೆ.
ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಮತ್ತು ಅರಿವು ಮೂಡಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಚೀನಾ ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಹಲವಾರು ಉಚಿತ ಯೋಜನೆಗಳನ್ನು ಜಾರಿಗೆ ತಂದಿದ್ದು ಅದೇ ಮಾದರಿಯಲ್ಲಿ ಭಾರತ ಸರ್ಕಾರ ಯೋಜನೆಗಳನ್ನು ರೂಪಿಸುವಂತೆ ಸಲಹೆ ನೀಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕಾಂತಮಣಿ ಮಾತನಾಡಿ, ಜನಸಂಖ್ಯೆಯಲ್ಲಿ ಸ್ಥಿರತೆಯನ್ನು ಕಾಪಾಡಿ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳನ್ನು ಪಡೆಯುವುದು ಆಯ್ಕೆ ಯಾಗಿರಬೇಕು ಹೊರತು ಅನಿವಾರ್ಯವಾಗಿರಬಾರದು. ಮದುವೆಯ ವಯಸ್ಸು ಮತ್ತು ಜನನಗಳ ನಡುವಿನ ಅಂತರವನ್ನು ಹೆಚ್ಚಿಸುವುದು, ಅನಪೇಕ್ಷಿತ ಗರ್ಭಧಾರಣೆಯನ್ನು ತಡೆಯುವುದು, ಗರ್ಭಪಾತವಾದ ನಂತರ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಳ್ಳುವುದು, ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿಯೂ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆ, ಮಾನವ ಹಕ್ಕುಗಳ ರಕ್ಷಣೆ, ಚಿಕ್ಕ ಕುಟುಂಬದ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಪಪಂ ಅಧ್ಯಕ್ಷ ಹೂವಣ್ಣ, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ಸಿಪಿಐ ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಚಂದ್ರೇಗೌಡ ಮತ್ತು ಸಿಬ್ಬಂದಿ ಹಾಜರಿದ್ದರು.
ಸಂಪಾದಕ - ರವಿ
0 Comments