ಕೊಣನೂರು ಕೆರೆ ಒತ್ತುವರಿ ತೆರವಿಗೆ ಕ್ರಮ ವೈ.ಎಂ. ರೇಣುಕುಮಾರ್

 

 ಅರಕಲಗೂಡು: ತಾಲೂಕಿನಲ್ಲಿ 166 ಕೆರೆಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ತಿಳಿಸಿದರು.

ಕೊಣನೂರು ದೊಡ್ಡಕೆರೆ ಒತ್ತುವರಿ ತೆರವುಗೊಳಿಸುವ ಸಂಬAಧ ಬುಧವಾರ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಒತ್ತುವರಿ ತೆರವುಗೊಳಿಸಲು ನಿರ್ದೇಶಿಸಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ 1066 ಕೆರೆಗಳ ಸರ್ವೇ ಕಾರ್ಯ ಕೈಗೊಂಡು ಆನ್‌ಲೈನ್‌ಲ್ಲಿ ಅಪ್‌ಲೋಡ್ ಮಾಡಿದ್ದು ಒತ್ತುವರಿ ತೆರಗೊಳಿಸಲು ಚಾಲನೆ ನೀಡಲಾಗಿದೆ. ಈ ಪೈಕಿ 166 ಕೆರೆಗಳ ಸರ್ವೇ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಿ ಸಂಬAಧಿಸಿದ ಆಯಾ ಗ್ರಾಮ ಪಂಚಾಯಿತಿ ಪಿಡಿಒ ಗಳಿಗೆ ನಿಯಮಾನುಸಾರ ಹಸ್ತಾಂತರಿಸಲಾಗಿದೆ. ಕೆರೆಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದರು.

ತಾಲೂಕಿನಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಲು ಜನರ ಸಹಕಾರ ಸಿಕ್ಕಿದೆ. ಕೊಣನೂರು ಕೆರೆ ಸರ್ವೇ ನಂ. 162ರ 131 ಎಕರೆ 34 ಕುಂಟೆ ವಿಸ್ತೀರ್ಣ ಹೊಂದಿದ್ದು ಈಗಾಗಲೇ ಶೇ. 60ರಿಂದ 70ರಷ್ಟು ಸರ್ವೇ ಕಾರ್ಯ ಮುಗಿದಿದೆ. ಅಂದಾಜು 40 ಎಕರೆ ಒತ್ತುವರಿಯಾಗಿದೆ. ಕೊನೆ ಹಂತದ ಸರ್ವೇ ಕೆಲಸ ಪೂರ್ಣಗೊಳಿಸಿದ ಬಳಿಕ ಎಷ್ಟು ಪ್ರಮಾಣದಲ್ಲಿ ಒತ್ತುವರಿಯಾಗಿದೆ ಎನ್ನುವ ಅಂಶ ಬಹಿರಂಗವಾಗಲಿದೆ. ಈಗಾಗಲೇ ವ್ಯಕ್ತಿಯೊಬ್ಬರು ಕೆರೆ ಜಾಗದಲ್ಲಿ ಬೆಳೆದಿದ್ದ ಜೋಳದ ಬೆಳೆ ಕಟಾವು ನಡೆಸಿ ಒತ್ತವರಿ ತೆರವುಗೊಳಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಸರ್ಕಾರದ ಆದೇಶದನ್ವಯ ಕೆರೆಗಳ ಒತ್ತುವರಿ ತೆರವುಗೊಳಿಸಿದರೆ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹಣೆ ಮಾಡಲು ನೆರವಾಗಲಿದೆ. ಇದರಿಂದ ಅಂತರ್ಜಲ ವೃದ್ಧಿಯಾಗುವುದಲ್ಲದೇ ಅಚ್ಚುಕಟ್ಟಿನಲ್ಲಿ ರೈತರ ಬೆಳೆ ಜಮೀನಿಗೆ ನೀರು ಸಿಗಲಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ದಾಹ ನೀಗಿಸಲು ನೆರವಾಗಲಿದೆ. ಹೀಗಾಗಿ ಜನರು ಸ್ವಯಂಪ್ರೇರಿತರಾಗಿ ಒತ್ತವರಿ ತೆರವಿಗೆ ಉತ್ತಮವಾಗಿ ಸಹಕರಿಸಿದರೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.

ರಾಜಸ್ವ ನಿರೀಕ್ಷಕ ಮಂಜುನಾಥ್, ಸಬ್ ಇನ್ಸ್ಪೆಕ್ಟರ್ ಅಜೇಯ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ರಮೇಶ್, ಪಿಡಿಒ ಗಣೇಶ್, ಗ್ರಾಮ ಲೆಕ್ಕಾಧಿಕಾರಿ ವಸಂತ ಕುಮಾರ್, ಪ್ರವೀಣ್ ಇದ್ದರು. 


ಸಂಪಾದಕ - ರವಿ

Post a Comment

0 Comments