ಅರಕಲಗೂಡು: ತಾಲ್ಲೂಕಿನ ಕೊಣನೂರು ಹೆದ್ದಾರಿಗೆ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಭೂಮಿಗೆ ನೀಡುವ ಪರಿಹಾರ ಮೊತ್ತದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಸಿದ್ದಾಪುರದಲ್ಲಿ ಸ್ಥಳೀಯ ರೈತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಸಂಸ್ಥಾಪಕ ರಾಜ್ಯಧ್ಯಕ್ಷ ಡಾ. ಎಸ್. ರಾಘವೇಂದ್ರ ಗೌಡ, ಸಿದ್ದಾಪುರ ಮುಖ್ಯರಸ್ತೆ ಮುಖಾಂತರ ಮಾಗಡಿಯಿಂದ ಸೋಮವಾರಪೇಟೆ ರಸ್ತೆ ಅಗಲೀಕರಣಕ್ಕೆ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವ ಕೆಶಿಪ್ 3 ರ ಯೋಜನೆ ಅಡಿ ಮೊದಲು ಭೂಮಿಕೆಯ ಮಾಡಿಕೊಟ್ಟ ರೈತರಿಗೆ ಪ್ರತಿ ಕುಂಟೆಗೆ 4,474 ರೂ. ನೀಡಲಾಗಿದೆ. ಎರಡನೇ ಹಂತದಲ್ಲಿ ಕ್ರಯ ಮಾಡಿಕೊಟ್ಟ ಪಕ್ಕದ ಜಮೀನಿನ ರೈತರಿಗೆ 12,375 ರೂ ನೀಡಿ ಸ್ವತ್ತನ್ನು ಅಧಿಕಾರಿಗಳು ಇನ್ನೊಂದೆಡೆ ಮಾಡಿಸಿಕೊಳ್ಳುವ ಮೂಲಕ ಪರಿಹಾರದಲ್ಲಿ ತಾರತಮ್ಯ ಎಸಗಿದ್ದಾರೆ. ಇದರಿಂದ ಸುಮಾರು 60 ರೈತ ಕುಟುಂಬದವರಿಗೆ ಪರಿಹಾರದ ಹಣದಲ್ಲಿ ತಾರತಮ್ಯವಾಗಿದೆ. ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಮಾಗಡಿಯಿಂದ ಸೋಮವಾರಪೇಟೆ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಸರ್ವೇ ಕಾರ್ಯ ಮುಗಿದಿದ್ದು ಪರಿಹಾರದ ಮೊತ್ತ ನೀಡುವುದರಲ್ಲಿ ಹಲವು ರೈತರಿಗೆ ಬಹಳ ತಾರತಮ್ಯವಾಗಿದೆ. ತಾರತಮ್ಯದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ತಾಲೂಕಿನ ದಂಡಾಧಿಕಾರಿಗಳಾದ ರೇಣುಕುಮಾರ್ ಮತ್ತು ಸಿಬ್ಬಂದಿವರ್ಗ ಕೂಡಲೇ ಪರಿಶೀಲನೆ ಮಾಡಿ ಅನ್ಯಾಯವಾಗಿರುವ ರೈತರಿಗೆ ಶೀಘ್ರವಾಗಿ ಸೂಕ್ತ ಪರಿಹಾರ ಕೊಡಬೇಕು. ಇಲ್ಲದಿದ್ದಲ್ಲಿ ತಾಲೂಕಿನಾದ್ಯಂತ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
-ಸಂಪಾದಕ - ರವಿ
0 Comments