ಅರಕಲಗೂಡು: ಕಾಂಗ್ರೆಸ್‌ಗೆ ಎ. ಮಂಜು ಅವರನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದರು.
ಹಳ್ಳಿಮೈಸೂರು ಹೋಬಳಿ ಹಾಗೂ ಈ ಭಾಗದ ಜಿಪಂ, ತಾಪಂ ಮಾಜಿ ಸದಸ್ಯರು, ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ಬೆಂಗಳೂರಿನ ಡಿಕೆಶಿ ನಿವಾಸಕ್ಕೆ ತೆರಳಿ ಎ. ಮಂಜು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಎದುರಾಳಿಯಾಗಿದೆ. ಹಾಗಾಗಿ ಕಾಂಗ್ರೆಸ್ ಬಲವರ್ಧನೆಗೆ ರಾಜಕೀಯ ಚತುರ ಎ. ಮಂಜು ಸಂಘಟನೆ ಅನಿವಾರ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎ. ಮಂಜು ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಾವು ನಾಯಕರ ತೀರ್ಮಾನಂದತೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಚುನಾವಣೆಯಲ್ಲಿ ಬೆಂಬಲಿಸಿದೆವು. ತದನಂತರ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಪ್ರಜ್ವಲ್ ರೇವಣ್ಣ ನಮ್ಮ ವಿರುದ್ದ ಪೊಲೀಸ್ ಠಾಣೆಯಲ್ಲಿ ಕೇಸು ಹಾಕಿಸಿದ್ದು ಕಿರುಕುಳ ಅನುಭವಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಬ್ಬಲಿಗಳಾಗಿದ್ದಾರೆ. ಇದಲ್ಲದೇ ಜಿಪಂ ಮತ್ತು ತಾಪಂ ಚುನಾವಣೆ ಸಮೀಪಿಸುತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಕೊರತೆ ಕಾಡುತ್ತಿದೆ. ಹೀಗಾಗಿ ಎ. ಮಂಜು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲೇ ಬೇಕು ಎಂದು ಪಟ್ಟುಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, ಎ. ಮಂಜು ಅವರು ಪಕ್ಷಕ್ಕೆ ಬರಲು ಒಪ್ಪಿದ್ದಾರೆಯೇ ಎಂದು ಮರುಪ್ರಶ್ನೆ ಎಸೆದರು. ನಾವೆಲ್ಲ ಒಪ್ಪಿಸಿ ಕರೆತರುತ್ತೇವೆ, ಎ. ಮಂಜು ಅವರನ್ನು ವಿಧಾನಸಭಾ ಚುನಾವಣೆಯಲ್ಲೂ ಗೆಲ್ಲಿಸಿಕೊಂಡು ಬರುತ್ತೇವೆ, ನಿಮ್ಮ ನಂಬಿಕೆ ಹುಸಿಗೊಳಿಸುವುದಿಲ್ಲ ಎಂದು ಕಾರ್ಯಕರ್ತರು ಏರುಧ್ವನಿಯಲ್ಲಿ ಆಗ್ರಹಿಸಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಮುಂದೆ ನೋಡೋಣ ಎನ್ನುತ್ತಾ ಡಿ.ಕೆ. ಶಿವಕುಮಾರ್ ಕಾರ್ಯಕರ್ತರಿಂದ ಹೂ ಮಾಲೆ ಸ್ವೀಕರಿಸಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿ ಕಳುಹಿಸಿರುವ ವಿಡಿಯೋ ಬಹಿರಂಗವಾಗಿದ್ದು ಜಿಲ್ಲಾ ಕಾಂಗ್ರೆಸ್‌ನಲ್ಲಿ ಬದಲಾವಣೆಯ ಗಾಳಿ ಬೀಸುವ ಸೂಚನೆಗಳು ಎದ್ದು ಕಾಣಿಸುತ್ತಿದೆ.
-ಸಂಪಾದಕ - ರವಿ
0 Comments