ಕೃಷಿ‌ ಉತ್ತೇಜನಕ್ಕೆ‌ ಎಲ್ಲರೂ ಕೈಜೋಡಿಸಿ ಎಟಿಆರ್ ಕೋರಿಕೆ

ಅರಕಲಗೂಡು: ಕೃಷಿ ಬೆಳೆಗಳಿಗೆ ಅತಿಯಾದ ರಾಸಾಯನಿಕ ಬಳಕೆ ಪರಿಣಾಮ ಸೇವಿಸುವ ಆಹಾರ‌ ವಿಷಕಾರಿಯಾಗಿ ರೋಗ ರುಜಿನಗಳಿಗೆ ದಾರಿ ಮಾಡಿಕೊಡಲಾಗುತ್ತಿದೆ. ಹಾಗಾಗಿ ಸಾವಯವ ಬೇಸಾಯ ಪದ್ದತಿಗೆ ಹೆಚ್ಚು ಒತ್ತು ನೀಡುವುದು ಒಳಿತು ಎಂದು ಶಾಸಕ ಎ.ಟಿ. ರಾಮಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಮಲ್ಲಿಪಟ್ಟಣ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಯಂತ್ರದಾರೆ ಉದ್ಘಾಟನಾ ಸಮಾರಂಭ ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಪ್ರತಿ ಬೆಳೆ ಬೆಳೆಯಲು ರಾಸಾಯನಿಕ ವಸ್ತುಗಳ ಬಳಕೆ ಮೀತಿ ಮೀರಿದೆ. ಪರಿಣಾಮವಾಗಿ ಭೂಮಿ ಸತ್ವ ಕಳೆದುಕೊಂಡು ಫಲವತ್ತಾದ ಮಣ್ಣು ಸವಕಲಾಗುತ್ತಿದೆ. ಜತೆಗೆ ತಿನ್ನುವ ಆಹಾರವು ವಿಷಕಾರಿಯಾಗಿ ಪರಿವರ್ತನೆಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಇಂದು ಅನೇಕ ಕಾಯಿಲೆಗಳು ಉಲ್ಭಣಿಸುತ್ತಿವೆ. ಕೊಟ್ಟಿಗೆ ಗೊಬ್ಬರ, ಹಸಿರೆಲೆ ಸಾವಯವ ಕೃಷಿ  ಪದ್ದತಿಯನ್ನು ಕೈಬಿಡುವುದು ಸೂಕ್ತವಲ್ಲ ಎಂದು ಪ್ರತಿಪಾದಿಸಿದರು.
ಆಧುನಿಕ ಜೀವನ ಶೈಲಿಗೆ ಮಾರು ಹೋಗುತ್ತಿರುವ ಯುವ ಸಮುದಾಯ ನಗರ ಪ್ರದೇಶಗಳಿಗೆ ವಲಸೆ ಹೋಗಿ ಕೃಷಿಯಿಂದ ವಿಮುಖರಾಗುವುದು ಉತ್ತಮ ಬೆಳವಣಿಗೆಯಲ್ಲ. ರೈತರು ವೈಜ್ಞಾನಿಕ ಕೃಷಿ ಪದ್ದತಿ ಕಡೆಗೂ ಹೆಚ್ಚು ಕಾಳಜಿ ವಹಿಸಬೇಕು. ಖಾಸಗಿಯಾಗಿ ದುಬಾರಿ ಬಾಡಿಗೆ ತೆತ್ತು ಯಂತ್ರೋಪಕರಣಗಳನ್ನು ಬಳಸದೆ ಕೃಷಿ ಇಲಾಖೆ ವತಿಯಿಂದ ದೊರೆಯುವ ಇಂತಹ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೋವಿಡ್ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದರೆ ಮೂರನೇ ಅಲೆಯ ಸೋಂಕನ್ನು ನಿವಾರಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬರೂ ಮೈಮರೆಯದೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದರು.

ತಾಲೂಕು ಕೃಷಿ ಸಹಾಯಕ ನಿದೇರ್ಶಕ ರಮೇಶ್ ಕುಮಾರ್,  ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ತಾಪಂ ಇಒ ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ಗ್ರಾಪಂ ಸದಸ್ಯರಾದ ಭಾಗ್ಯಮ್ಮ, ಸುಮಿತ್ರ, ಪಿಡಿಒ ರಂಗಸ್ವಾಮಿ, ಕೃಷ್ಣರಾಜ್, ಆಶಾ ಕಾರ್ಯಕರ್ತರು, ಸಿಬ್ಬಂದಿ ಇದ್ದರು.
ರೈತರಿಗೆ ಬಿತ್ತನೆ ಬೀಜ, ಕೃಷಿ ಪರಿಕರಗಳನ್ನು ವಿತರಿಸಲಾಯಿತು.

                     ಸಂಪಾದಕ - ರವಿ                            

Post a Comment

0 Comments