ಅರಕಲಗೂಡು: ತಾಲೂಕಿನ ಅರೆಮಲೆನಾಡು ಹೋಬಳಿ ಕೇಂದ್ರವಾದ ಮಲ್ಲಿಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರಿಗೆ ಮನವಿ ಮಾಡಿ ಕೇಳಿಕೊಂಡರು.
ತಾಲೂಕಿನ ಕೊಣನೂರಿನಲ್ಲಿ ಬುಧವಾರ ಕೋವಿಡ್ ಆಸ್ಪತ್ರೆ ಉದ್ಘಾಟಿಸಲು ಬಂದಿದ್ದ ಸಚಿವರಿಗೆ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದ ಅಧ್ಯಕ್ಷರು ಆಸ್ಪತ್ರೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕೋರಿದರು.
ಕೊಡಗಿನ ಗಡಿ ಭಾಗದಲ್ಲಿರುವ ಹೋಬಳಿಯು ಸದಾ ಕಾಡಾನೆ ದಾಳಿಗೆ ಸಿಲುಕುತ್ತಿದ್ದು ರೈತಾಪಿ ವರ್ಗದವರು, ಕಾಫಿ ತೋಟ ಮತ್ತಿರರ ಕೆಲಸಗಳಿಗಾಗಿ ಉತ್ತರ ಭಾಗದ ಜಿಲ್ಲೆಗಳು, ಹೊರ ರಾಜ್ಯಗಳಿಂದ ಕೂಲಿ ಕಾರ್ಮಿಕರು ಬರುತ್ತಾರೆ. ಮಲ್ಲಿಪಟ್ಟಣದಲ್ಲಿರುವ 24x7 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆ ಕಾಡುತ್ತಿದ್ದು ಶಿಥಿಲವಾದ ಹಳೆಯ ಕಿಷ್ಕಿಂದೆ ಕಟ್ಟಡದಲ್ಲಿ ಮೂರು ಹಾಸಿಗೆ ಹೊಂದಿದೆ. ಇಪ್ಪತ್ತು ಹಾಸಿಗೆಗಳಿಗೆ ಏರಿಕೆಗೊಳಿಸಬೇಕು. ಏಕೆಂದರೆ ಇದು ಬಹಳ ಇಂಟಿರಿಯಲ್ ಏರಿಯವಾಗಿದ್ದು ಸೌಲಭ್ಯಗಳಿಲ್ಲದೆ ಆಸ್ಪತ್ರೆ ಸ್ಥಿತಿ ಶೋಚನೀಯವಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಆಸ್ಪತ್ರೆಗೆ ಅಂಬುಲೆನ್ಸ್ ವಾಹನ ಬೇಕಾಗಿದೆ. ಕೆಎಸ್ಸಾರ್ಟಿಸಿಯ ಆಕ್ಸಿಜನ್ ಸೌಕರ್ಯವಿರುವ ವಾಹನ, ಆಯುಷ್ಮಾನ್ ಕಿಟ್ ಗಳನ್ನು ಕೋವಿಡ್ ರೋಗಿಗಳಿಗೆ ಒದಗಿಸಿಕೊಡಬೇಕು. ದೈನಂದಿನವಾಗಿ ಆಸ್ಪತ್ರೆಗೆ ಬರುವ ಸಾರ್ವಜನಿಕರು ಹಾಗೂ ಕೂಲಿ ಕಾರ್ಮಿಕರಿಗೆ ಗುಣಮಟ್ಟದ ಚಿಕಿತ್ಸೆ ಇಲ್ಲಿಯೇ ಸಿಗುವಂತೆ ಆದ್ಯ ಸೌಕರ್ಯ ಗಳನ್ನು ಪೂರೈಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಸಂಪಾದಕ - ರವಿ
0 Comments