ಮನುಕುಲಕ್ಕೆ ಪರಿಸರ ಪ್ರಜ್ಞೆ ಪಾಠವಾಗಲಿ- ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ ಅಭಿಮತ

ಅರಕಲಗೂಡು: ಪರಿಸರ ಪ್ರಕೃತಿ ನಮ್ಮೆಲ್ಲ ಆರಾದ್ಯ ದೇವತೆಯೂ ಹೌದು, ಇದಕ್ಕಾಗಿ ಇಂದಿನ ಕೋವಿಡ್ ಸಂಕಷ್ಟದ ಕಾಲದಲ್ಲಿ ಪ್ರಾಣವಾಯು ಆಮ್ಲಜನಕದ ಕೊರತೆಯಿಂದ ಉಂಟಾದ ಜೀವಹಾನಿಯಂತಹ ಅನಾಹುತಗಳನ್ನು ಮನಗಂಡು ಎಲ್ಲರೂ ಪರಿಸರದ ಮಹತ್ವ ಅರಿತು ಗಿಡ, ಮರಗಳನ್ನು ಬೆಳೆಸುವ ಕಾಯಕ ಮೈಗೂಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಪ್ರತಿಪಾದಿಸಿದರು.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗ್ರಾಮ ಪಂಚಾಯಿತಿ ಆವರಣ, ಸಮುದಾಯ ಭವನ, ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಮಾತನಾಡಿದ ಅವರು, ಪ್ರಕೃತಿ, ಕಾಡು ನಾಶವಾದರೆ ಮನುಕುಲ ವಿಪ್ಲವ ಏನಾಗುತ್ತದೆ ಎಂಬುದಕ್ಕೆ ಮಾರಕ ರೋಗಗಳೇ ಜೀವ ಸಾಕ್ಷಿಯಾಗಿಯಾಗಿವೆ. ಪರಿಸರ ನಾಶದ ಪರಿಣಾಮವನ್ನು ಇಂದು ಇಡೀ ಮನುಕುಲವೇ ಅನುಭವಿಸುವ ಸ್ಥಿತಿ ಬಂದಿದೆ. ಹೀಗಾಗಿ ಒಂದು ದಿನಕ್ಕಷ್ಟೆ ಗಿಡಗಳನ್ನು ನೆಡುವ ಪ್ರವೃತ್ತಿ ತೊರೆದು ವರ್ಷಪೂರ್ತಿ ಹೊಲ, ಜಮೀನು ಬದುಗಳ ಬದಿ, ಖಾಲಿಯಿರುವ ಜಾಗದಲ್ಲಿ ಸಸಿಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಒತ್ತು ನೀಡಿ ಜೀವ ವೈವಿದ್ಯತೆಯನ್ನು ಉಳಿಸಬೇಕಿದೆ ಎಂದರು.

ಮಳೆ, ಹವಾಮಾನ, ತಾಪಮಾನ ವೈಪರೀತ್ಯ ತಪ್ಪಿಸುವ ಸಲುವಾಗಿ ಅರಣ್ಯ ಬೆಳೆಸುವುದು ಅನಿವಾರ್ಯ ಸತ್ಕಾರ್ಯವಾಗಿದೆ. ಮಾನವ ಕುಲ ಮತ್ತು ಎಲ್ಲ ಜೀವ ಸಂಕುಲವನ್ನು ಮುನಿಯುವ ಪ್ರಕೃತಿ ಹೊಡೆತದಿಂದ ಪಾರು ಮಾಡಲು ಪರಿಸರ ಬೆಳೆಸುವ ಪುಣ್ಯದ ಪ್ರವೃತಿಯನ್ನು ಸದಾ ಹೊಣೆಗಾರಿಕೆಯಾಗಿ ತೆಗೆದುಕೊಳ್ಳುವ ಅವಶ್ಯಕತೆ ಅಧಿಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಲಕ್ಷ್ಮಿ, ಸದಸ್ಯರಾದ ಲಲಿತಾ ವೇದ ಕುಮಾರ್, ಪೂಜಾ ರಂಗಸ್ವಾಮಿ, ಟಿ.ಡಿ. ಸುಮಿತ್ರ, ಪ್ರಕಾಶ್, ಚಂದ್ರೇಗೌಡ, ಪಿಡಿಒ ರಂಗಸ್ವಾಮಿ, ರಾಜಸ್ವ ನಿರೀಕ್ಷಕ ಶಶಿಕುಮಾರ್, ಡಾ. ಸೌಜನ್ಯ ಮತ್ತಿತರರು ಪಾಲ್ಗೊಂಡಿದ್ದರು.

...................ಸಂಪಾದಕ- ರವಿ 

Post a Comment

0 Comments