ಅಂತೂ ಉದ್ಘಾಟನೆ ಭಾಗ್ಯ ಕಂಡಿತು ಇಂದು ಕೊಣನೂರು ಕೋವಿಡ್ ಆಸ್ಪತ್ರೆ

ಅರಕಲಗೂಡು: ಕೋವಿಡ್ ಆಸ್ಪತ್ರೆಗಳಲ್ಲಿ ಶೀಘ್ರ ವೈದ್ಯರ ಕೊರತೆ ನೀಗಿಸಿ ಸೋಂಕಿತರಿಗೆ ಅಗತ್ಯ ಔಷಧಗಳನ್ನು ಪೂರೈಸಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾ ರಿ ಸಚಿವ ಕೆ. ಗೋಪಾಲಯ್ಯ ಭರವಸೆ ನೀಡಿದರು.

ತಾಲೂಕಿನ ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಕೋವಿಡ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರಕ್ಕೆ ಗಡಿಭಾಗದಿಂದ ದೂರ ಇರುವ ಕಾರಣಕ್ಕಾಗಿ ಕರೊನಾ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ನೀಡುವ ಉದ್ದೇಶದಿಂದ 25 ಬೆಡ್ ಗಳ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಸದ್ಯದಲ್ಲೇ ಆಸ್ಪತ್ರೆಗೆ ವೈದ್ಯರು ನೇಮಕವಾಗಲಿದ್ದಾರೆ. ಅರಕಲಗೂಡು ಮತ್ತು ಕೊಣನೂರು ಕೋವಿಡ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಕೆಲಸ ಶುರುವಾಗಲಿದೆ ಎಂದು ತಿಳಿಸಿದರು.

ಹಾಸನದ ಹೀಮ್ಸ್ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಇಪ್ಪತ್ತು ಬೆಡ್ ಗಳನ್ನು ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯವಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್  ಕೊರತೆ ಉಂಟಾಗದಂತೆ ನಿಗಾ ವಹಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದ್ದು ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭ್ಯವಿರುವಂತೆ ಕ್ರಮ ವಹಿಸಲಾಗಿದೆ. ವೈದ್ಯರ ನಡೆ ಹಳ್ಳಿಯ ಕಾರ್ಯಕ್ರಮ ಯಶಸ್ವಿಯಾಗಿದ್ದು ತಾಲೂಕಿನ ಹನ್ನೆರಡು ವೈದ್ಯರ ತಂಡ ಗ್ರಾಮಗಳಿಗೆ ಭೇಟಿ ನೀಡಿದೆ. ಕೆಲ ದಿನಗಳಲ್ಲಿ ಎಲ್ಲ ಹಳ್ಳಿಗಳಲ್ಲಿ ಜನರ ಕೋವಿಡ್ ಪರೀಕ್ಷೆ ಕಾರ್ಯ ಮುಗಿಯಲಿದೆ. ಕೋವಿಡ್ ಪಿಡೀತರ ಸಂಖ್ಯೆಯೂ ಶೇ 10ರಿಂದ 8ಕ್ಕೆ ಇಳಿಕೆಯಾಗಲಿದೆ. ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಶಾಸಕರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.

ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಆರೋಗ್ಯ ಸಾರ್ವಜನಿಕರ ಹಕ್ಕು. ಆಡಳಿತ ನಡೆಸುವ ಸರ್ಕಾರ ಅದನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಶಾಸಕರು ಆಡಳಿತದ ಭಾಗ ಅಲ್ಲ. ಕೊಣನೂರು ಆಸ್ಪತ್ರೆ ಯನ್ನು ಒಂದೂವರೆ ತಿಂಗಳ ಹಿಂದೆಯೇ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿತ್ತು. ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲು ಎನ್ ಜಿಒ ಸಂಸ್ಥೆ ಕೂಡ ಮುಂದೆ ಬಂದಿತ್ತು.‌ಆದರೆ ಪ್ರಯತ್ನ ಫಲ ನೀಡಲಿಲ್ಲ. ಇದೀಗ ಕೋವಿಡ್ ಆಸ್ಪತ್ರೆ ಉದ್ಘಾಟಿಸಿರುವುದು ಈ ಭಾಗದ ಜ‌ನತೆಗೆ ಅನುಕೂಲಕರವಾಗಲಿದೆ. ಇದಕ್ಕೆ ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ಧನ್ಯವಾದಗಳು ಎಂದರು.

ಕೊಣನೂರು ಸರ್ಕಾರಿ ಆಸ್ಪತ್ರೆಗೆ ಶಾಶ್ವತ ವೈದ್ಯರ ನೇಮಿಸಿ 50 ಹಾಸಿಗೆಗೆ ಮೇಲ್ದರ್ಜೆಗೇರಿಸಬೇಕು. ಕೋವಿಡ್ ಕೇರ್ ಕೇಂದ್ರಗಳಲ್ಲಿ ಸೋಂಕಿತರಿಗೆ ಅಗತ್ಯ ಔಷಧ ಪೂರೈಸಬೇಕು.ಕರಿಮಾರಿ ರೋಗ ತಡೆಗಟ್ಟಬೇಕು. ಕರೊನಾ ಎರಡನೇ ಅಲೆ ನಿಗ್ರಹಿಸಿ ಮೂರನೇ ಅಲೆ ಶುರುವಾಗುವ ವೇಳೆಗೆ ಸರ್ಕಾರ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್, ಡಿಎಚ್ ಒ ಡಾ. ಸತೀಶ್, ಟಿಎಚ್ ಒ ಡಾ. ಸ್ವಾಮೀಗೌಡ, ಜಿಪಂ ಸಿಇಒ ಪರಮೇಶ್, ತಹಸೀಲ್ದಾರ್ ರೇಣುಕುಮಾರ್, ತಾಪಂ ಇಒ ರವಿಕುಮಾರ್ ಇತರರು ಇದ್ದರು.


                                                          ಸಂಪಾದಕ -   ರವಿ

Post a Comment

0 Comments