ಗಗನದತ್ತ ತೈಲ ಬೆಲೆ ಕಾಂಗ್ರೆಸ್ ಕಿಡಿ

ಕೊಣನೂರು : ತೈಲ ಬೆಳೆ ಹೆಚ್ಚಿಸುವ ಮೂಲಕ ಬಡವರ ಹೊಟ್ಟೆಯ ಮೇಲೆ ಕೇಂದ್ರ ಸರ್ಕಾರ ಬರೆ ಎಳೆಯುತ್ತಿದೆ. ಸಾಮಾನ್ಯ ಜನರ ಸಮಸ್ಯೆಯ ಬಗ್ಗೆ ಸಹಾನುಭೂತಿ ತೋರಿಸುವ ಬದಲಾಗಿ ಜನರ ಸಂಕಷ್ಟಗಳನ್ನು ಕಡೆಗಣಿಸಿ ಮತ್ತು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ನೋವುಂಟು ಮಾಡಿರುವ ಬಿಜೆಪಿ ಸರ್ಕಾರದ ಜನ ವಿರೋಧಿ ಧೋರಣೆಯನ್ನು ಖಂಡಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಡಾ: ದಿನೇಶ್ ಭೈರೇಗೌಡ ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದ ವೈಎಸ್‌ಆರ್ ಪೆಟ್ರೋಲ್ ಬಂಕ್ ಎದುರು ಶುಕ್ರವಾರ ‘ಪೆಟ್ರೋಲ್ 100 ನಾಟೌಟ್’ ಪ್ರತಿಭಟನೆ ನಡೆಸಿದ ಸಂಧರ್ಭ ಮಾತನಾಡಿದ ಅವರು ಪೆಟ್ರೋಲ್, ಡಿಸೇಲ್ ಬೆಲೆ ನಿತ್ಯವೂ ಹೆಚ್ಚುತ್ತಿದ್ದು, ಇದು ಸರಕು ಸಾಗಣೆ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಿದೆ. ಇದರಿಂದ ಅಗತ್ಯವಸ್ತುಗಳ ಬೆಲೆ ಹೆಚ್ಚುತ್ತಿದೆ. ಅಂತಿಮವಾಗಿ ಇದರ ಹೊರೆ ಜನಸಾಮಾನ್ಯರೇ ಹೊರುವಂತಾಗಿದೆ. ಕೊರೊನಾ ಸಮಸ್ಯೆಯಿಂದ ಜರ್ಝರಿತರಾಗಿರುವ ಜನ ಈಗ ಇಂಧನ ದರ ಹೆಚ್ಚಳದಿಂದ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ’ ಎಂದು ಆರೋಪಿಸಿದರು.

ಕೆಪಿಸಿಸಿ ಸದಸ್ಯ ಮಂಜುನಾಥ್ ಹೆಂಟಗೆರೆ ಮಂಜುನಾಥ್ ಮಾತನಾಡಿ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಡುಗೆ ಅನಿಲ ಬೆಲೆಗಳು ಹೆಚ್ಚಾಗಿರುವುದರಿಂದ ಜನಸಾಮಾನ್ಯರಿಗೆ ಎದುರಾದ ಸಮಸ್ಯೆಗಳನ್ನು ಎತ್ತಿತೋರಿಸಲು ಮತ್ತು ಸಾರ್ವಜನಿಕ ಹಿತಾಸಕ್ತಿ ಬಯಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅರಕಲಗೂಡು ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ ಜನರ ತನ್ನ ಮತ್ತಷ್ಟು ಸಮಸ್ಯೆಗೆ ದೂಡಿದೆ. ತೈಲ ಬೆಲೆ ಏರಿಕೆಯಿಂದ ಇತರೆ ವಸ್ತುಗಳ ಬೆಲೆಯೂ ಸಾಕಷ್ಟು ಏರಿಕೆಯಾಗಿದೆ. ಇದರಿಂದ ಜನರು ಜೀವನ ಮಾಡದಂತಹ ಪರಿಸ್ಥಿತಿ ತಂದೊಡ್ಡಿದ್ದಾರೆ. ಇದರ ಜತೆಗೆ ಆರ್ಥಿಕ ಕುಸಿತ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಕೇಂದ್ರದಲ್ಲಿ ಜಿಜೆಪಿ ನೇತೃತ್ವ ಸರ್ಕಾರದ ನೀತಿಗಳಿಂದಾಗಿ ದೇಶದ ಜನರು ಕಳೆದ 15 ತಿಂಗಳುಗಳಿಂದ ಕೊವಿಡ್19 ವಿರುದ್ಧ ಹೋರಾಡುತ್ತಿದ್ದಾರೆ. ಜನಸಾಮಾನ್ಯರು ಸರಿಯಾದ ಸಮಯದಲ್ಲಿ ಔಷಧಗಳನ್ನು ಮತ್ತು ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಮತ್ತೊಂದರೆಡೆ ಆರ್ಥಿಕ ವಿಫಲತೆ ಮತ್ತು ವ್ಯಾಪಕವಾಗಿ ನಿರುದ್ಯೋಗದಿಂದ ಬಳಲುತ್ತಿದ್ದಾರೆ ಎಂದು ಭಾವನಾತ್ಮಕ ಹಾಗೂ ಸುಳ್ಳಿನ ಆಡಳಿತ ನೀಡುವುದನ್ನು ಪ್ರಧಾನಿ ನರೇಂದ್ರ ಮೋದಿ ಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅರಕಲಗೂಡು ಪ.ಪಂ ಸದಸ್ಯ ಅನಿಕೇತನ್, ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಬಾಜ್, ತಾಲೂಕು ರಾಹುಲ್ ಗಾಂಧಿ ವಿಚಾರ ಮಂಚ್ ಅಧ್ಯಕ್ಷ ಉಬೇದ್, ಮುಖಂಡರುಗಳಾದ ಅರಕಲಗೂಡು ಜಮೀರ್, ಅರುಣ್ ಹಂಪಾಪುರ, ಅರಕಲಗೂಡು ಮಧು, ಕೊಣನೂರಿನ ಸುಹಿಲ್, ರಿಹಾನ್, ಸಾಗರ್, ಲುಕ್ಮಾನ್, ಅಕ್ಮಲ್ ಮುಂತಾದವರು ಇದ್ದರು.


                          ಸಂಪಾದಕ - ರವಿ                        

Post a Comment

0 Comments