ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ

ಇಹಲೋಕದ ಸಂಚಾರ ನಿಲ್ಲಿಸಿದ ‘ಸಂಚಾರಿ’

ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿ ಕೋಮಾದಲ್ಲಿದ್ದ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಬೈಕ್ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ನಟನನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳಿಗೆ ಗಂಭೀರ ಗಾಯಗಳಾಗಿ ನಿಷ್ಕ್ರಿಯವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಂದು ಬೆಳಗ್ಗೆ ನಟನ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆ ವೈದ್ಯ ಡಾ. ಅರುಣ್ ಕುಮಾರ್ ನಾಯ್ಕ್ ಮಾತನಾಡಿ, ಸಂಚಾರಿ ವಿಜಯ್ ಗೆ ಚಿಕಿತ್ಸೆ ಶುರುವಾಗಿ 36 ಗಂಟೆಗೆ ಆಗಿದೆ. ಆಸ್ಪತ್ರೆಗೆ ಬಂದಾಗ ಅವರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಆಸ್ಪತ್ರೆಗೆ ಬಂದ ಕೆಲವೇ ನಿಮಿಷದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಸದ್ಯ ಅವರ ಬ್ರೈನ್ ಫೇಲ್ಯೂರ್ ಆಗಿದೆ. 36 ಗಂಟೆಯಾದ್ರೂ ವಿಜಯ್ ಸ್ಪಂದಿಸ್ತಿಲ್ಲ. ಎಷ್ಟೇ ಚಿಕಿತ್ಸೆ ಕೊಟ್ರು ಸ್ಪಂದಿಸ್ತಿಲ್ಲ. ಮೆದುಳು ಚಿಕಿತ್ಸೆಗೆ ಸ್ಪಂದಿಸ್ತಿಲ್ಲ. ಎಲ್ಲಾ ಚಿಕಿತ್ಸೆ ಕೊಡಲಾಗ್ತಿದೆ. ವಿಜಯ್ ಉಸಿರಾಟ ಕೂಡ ಕ್ಷೀಣವಾಗಿದೆ. ಚಿಕಿತ್ಸೆ ಕೊಟ್ರೂ ರಿಕವರಿ ಕಷ್ಟ ಎಂಬುದಾಗು ವೈದ್ಯರು ಮಾಹಿತಿ ನೀಡಿದ್ದಾರೆ.

*ಅಪಘಾತವಾಗಿದ್ದು ಹೇಗೆ?:* ಶನಿವಾರ ರಾತ್ರಿ ಗೆಳೆಯನ ಮನೆಯಲ್ಲಿ ಊಟ ಮಾಡಿಕೊಂಡು ಬೈಕಿನಲ್ಲಿ ನಟ ಹಿಂದಿರುಗುತ್ತಿದ್ದರು. ಗೆಳೆಯ ನವೀನ್ ಬೈಕ್ ಓಡಿಸುತ್ತಿದ್ದು, ವಿಜಯ್ ಹಿಂಬದಿಯಲ್ಲಿ ಕುಳಿತಿದ್ದರು. ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ನಟ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು.

ವಿಜಯ್ ಬಲ ತೊಡೆ ಭಾಗ ಮುರಿದಿದ್ದು, ಮೆದುಳಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ತಲೆಗೆ ಪೆಟ್ಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದರಿಂದ ರಾತ್ರಿಯೇ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಮೆದುಳಿನ ರಕ್ತಸ್ತ್ರಾವ ತಡೆಗೆ ಸರ್ಜರಿ ನಡೆದಿತ್ತು. ಡಾ.ಅರುಣ್.ಎಲ್.ನಾಯ್ಕ್ ಟೀಂ ಸಂಚಾರಿ ವಿಜಯ್ ಗೆ ಚಿಕಿತ್ಸೆ ನಿಡಿದ್ದರು. ಆರೋಗ್ಯದ ಮಾಹಿತಿ ನೀಡಲು ಆಸ್ಪತ್ರೆ 48 ಗಂಟೆ ಸಮಯ ಕೇಳಿತ್ತು. ಅಲ್ಲದೆ ನಟನಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿತ್ತು.

ಮೂಲತಃ ರಂಗಭೂಮಿ ಕಲಾವಿದರಾಗಿರುವ ಸಂಚಾರಿ ವಿಜಯ್, ‘ನಾನು ಅವನಲ್ಲ, ಅವಳಲ್ಲ’ ಸಿನಿಮಾ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಸಿನಿಮಾ ಜೊತೆಯಲ್ಲಿ `ಉಸಿರು’ ಹೆಸರಿನ ತಂಡವನ್ನು ಕಟ್ಟಿಕೊಂಡು ಲಾಕ್‍ಡೌನ್ ನಲ್ಲಿ ಸಂಕಷ್ಟ ಸಿಲುಕಿದವರಿಗೆ ಸಹಾಯ ಮಾಡುತ್ತಿದ್ದರು.

ಸದ್ಯ ನಟನ ನಿಧನಕ್ಕೆ ಚಿತ್ರರಂಗ ಸೇರಿದಂತೆ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ.


Post a Comment

0 Comments