ಅರಕಲಗೂಡು: ತಾಲ್ಲೂಕಿನಲ್ಲಿ ಕೋವಿಡ್ ನಿರ್ವಹಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಅತ್ಯಂತ ಸಮರ್ಥ ರೀತಿಯಲ್ಲಿ ಸೋಂಕನ್ನು ತಡೆಗಟ್ಟಲಾಗುತ್ತಿದೆ ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೋವಿಡ್ ನಿರ್ಹಣೆ ಕುರಿತು ಕೈಗೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ತಾಲ್ಲೂಕಿನಲ್ಲಿ 5 ಕೋವಿಡ್ ಆರೈಕೆ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳು ಮಂಜೂರಾತಿ ನೀಡಿದ್ದಾರೆ. ಬರಗೂರು, ಕಬ್ಬಳಿಗೆರೆ ಹಾಗೂ ಬಸವಾಪಟ್ಟಣದಲ್ಲಿ ಆರೈಕೆ ಕೇಂದ್ರಗಳನ್ನು ತೆರೆದಿದ್ದು ರೋಗಿಗಳಿಗೆ ಆರೈಕೆ ನೀಡಲಾಗುತ್ತಿದೆ. ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ 12 ತಂಡಗಳು ಪ್ರತಿದಿನ 40 ರಿಂದ 45 ಗ್ರಾಮಗಳಿಗೆ ತೆರಳಿ ಪರೀಕ್ಷೆ ನಡೆಸುತ್ತಿದ್ದಾರೆ. ವೈದ್ಯರ ತಂಡ ಗ್ರಾಮಗಳಿಗೆ ಬರುತ್ತಿದ್ದು ಜನರು ಆತಂಕ ಪಡದೆ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದರು. ಸೋಂಕಿತರನ್ನು ಕಡ್ಡಾಯವಾಗಿ ಆರೈಕೆ ಕೇಂದ್ರಕ್ಕೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಸೋಂಕಿತರನ್ನು ಕರೆದೊಯ್ಯಲು ಹಾಗೂ ಗುಣಮುಖರಾದವರನ್ನು ವಾಪಸ್ ಕಳಿಸಲು 8 ವಾಹನಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು. ನಿರಾಶ್ರಿತರು, ಬಡವರಿಗೆ ಬಹಳಷ್ಟು ಜನ ದಾನಿಗಳು ಸಿದ್ದ ಪಡಿಸಿದ ಆಹಾರವನ್ನು ವಿತರಣೆ ಮಾಡುವ ಮೂಲಕ ನೆರವು ನೀಡುತ್ತಿದ್ದಾರೆ. ಬಹಳಷ್ಟು ವೇಳೆ ವಿತರಿಸಿದವರಿಗೆ ವಿತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ದಾನಿಗಳು ತಾಲ್ಲೂಕು ಆಡಳಿತದ ಗಮನಕ್ಕೆ ತಂದಲ್ಲಿ ಆರೋಗ್ಯ ಇಲಾಖೆ ಮೂಲಕ ಪರೀಕ್ಷೆ ಮಾಡಿಸಿ ದಾನಿಗಳ ಸಮ್ಮುಖದಲ್ಲೆ ಅರ್ಹರಿಗೆ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ ಸ್ವಾಮಿಗೌಡ ಮಾತನಾಡಿ, ಕೋವಿಡ್ ಸೋಂಕು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹಬ್ಬಿದೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುವ ಸಂಗಡ ಕಡ್ಡಾಯವಾಗಿ ತಪಾಸಣೆಗೆ ಒಳಗಾಗಿ ಸೋಂಕು ತಗುಲಿದ್ದರೆ ಪ್ರಾರಂಭದ ಹಂತದಲ್ಲೆ ಚಿಕಿತ್ಸೆ ಪಡೆದರೆ ಗುಣಮುಖರಾಗ ಬಹುದು. ನಿರ್ಲಕ್ಷ ವಹಿಸಿ ಉಲ್ಬಣಿಸಿದ ಬಳಿಕ ಚಿಕಿತ್ಸೆಗೆ ಬಂದರೆ ಕಷ್ಟಕರವಾಗಲಿದೆ ಎಂದರು.
ತಾಲ್ಲೂಕಿನ 22 ಸ್ಥಳಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಜನರು ಲಸಿಕೆ ಪಡೆಯಬೇಕು. ಕೊ ವ್ಯಾಕ್ಸಿನ್ ಮೊದಲ ಲಸಿಕೆ ಪಡೆದ ಇನ್ನೂ 1500 ಮಂದಿ ಎರಡನೆ ಹಂತದ ಲಸಿಕೆ ಪಡೆದಿಲ್ಲ, ಕೂಡಲೆ ಎರಡನೆ ಹಂತದ ಲಸಿಕೆ ಹಾಕಿಸಿಕೊಳ್ಳಬೇಕು. ನಿರ್ಲಕ್ಷಿಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸಾಧ್ಯವಾಗುವುದಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡುವ ಮೂಲಕ ಕೊರೊನಾ ಮುಕ್ತ ತಾಲ್ಲೂಕನ್ನಾಗಿಸಲು ಸಹಕಾರ ನೀಡುವಂತೆ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಚ್.ಪಿ.ಲಿಂಗರಾಜ್ ಇದ್ದರು.
ಸಂಪಾದಕ - ರವಿ
0 Comments