ಅರಕಲಗೂಡು: ಜನ ಮೆಚ್ಚಿದ ನಾಯಕ ಎಂ.ಟಿ. ಕೃಷ್ಣೇಗೌಡ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಪಕ್ಷದ ಸಂಘಟನೆಗೆ ಹೆಚ್ಚಿನ ಶಕ್ತಿ ಬಂದಿದ್ದು ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಏಳಿಗೆಗೆ ಶ್ರಮಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಣ್ ತಿಳಿಸಿದರು.
ಪಕ್ಷ ಸೇರ್ಪಡೆಯಾದ ಎಂ.ಟಿ. ಕೃಷ್ಣೇಗೌಡ ಅವರು ಪಟ್ಟಣಕ್ಕೆ ಶನಿವಾರ ಆಗಮಿಸಿದ ಹಿನ್ನಲೆಯಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಸ್ವಾಗತ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನಿವಾರ್ಯ ಕಾರಣಗಳಿದ ಪಕ್ಷದ ಟಿಕೆಟ್ ಸಿಗದೆ ದೂರ ಉಳಿದಿದ್ದರು. ಪಕ್ಷೇತರವಾಗಿ ವಿಧಾನಸಭಾ ಚುಮಾವಣೆಗೆ ಸ್ಪರ್ಧಿಸಿ 56 ಸಾವಿರ ಮತಗಳನ್ನು ಪಡೆದು ಜನ ಮೆಚ್ಚುಗೆ ಗಳಿಸಿರುವ ಧೀಮಂತ ನಾಯಕ ಕೃಷ್ಣೇಗೌಡ ಅವರನ್ನು ಯಾವುದೇ ಶರತ್ತುಗಳಿಲ್ಲದೇ ಇದೀಗ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಎಲ್ಲರ ಸರ್ವಾನುಮತದಿಂದ ಕಾಂಗ್ರೆಸ್‌ಗೆ ಮರು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದರು.
ಪಕ್ಷಕ್ಕೆ ಸೇರ್ಪಡೆಯಾದ ಎಂ.ಟಿ. ಕೃಷ್ಣೇಗೌಡ ಮಾತನಾಡಿ, ಕಾಂಗ್ರೆಸ್ ಬಡವರ ಪರವಾದ ಪಕ್ಷವಾಗಿದೆ. ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒಕ್ಕೋರಲ ಆಹ್ವಾನದ ಮೇರೆಗೆ ಮರು ಸೇರಿದ್ದು ನಾನೂ ಕೂಡ ಬಡವರ ಪರವಾಗಿ ಕೆಲಸ ಮಾಡುವ ಮೂಲಕ ಪಕ್ಷದ ಏಳಿಗೆಗೆ ಹಾಗೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಶ್ರೇಯಸ್ ಪಟೇಲ್ ಅವರ ಗೆಲುವಿಗೆ ಶಕ್ತಿಮೀರಿ ಶ್ರಮಿಸುವುದಾಗಿ ತಿಳಿಸಿದರು.
ಪಕ್ಷದಲ್ಲಿ ಯಾವುದೇ ಸ್ಥಾನಮಾನದ ನಿರೀಕ್ಷೆ ಇಟ್ಟುಕೊಂಡಿಲ್ಲ. ನನ್ನ ಸೇವೆ ಪರಿಗಣಿಸಿ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರ ನೀಡುವ ವಿಶ್ವಾಸವಿದೆ. ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಇಲ್ಲಿ ಇರುವುದು ಒಂದೇ ಕಾಂಗ್ರೆಸ್ ಗುಂಪು, ಪಕ್ಷಕ್ಕಾಗಿ ಎಲ್ಲರೂ ದುಡಿಯುತ್ತೇವೆ. ನನಗಿರುವುದು ಒಂದೇ ಮನೆ ಎಲ್ಲೂ ಹೋಗದೆ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವೆ ಎಂದು ಸ್ಪಷ್ಟಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ವೇಳೆ ಕೃಷ್ಣೇಗೌಡ ಅವರಿಗೆ ಅನ್ಯಾಯವಾಗಿದೆ. ಕ್ಷೇತ್ರದಲ್ಲಿ ಅವರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ಎಲ್ಲ ಕಾರ್ಯಕರ್ತರು ಹಾಗೂ ಬೆಂಬಲಿಗರ ಒತ್ತಾಸೆಯಿಂದ ಪಕ್ಷದ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಶ್ರೇಯಸ್ ಪಟೇಲ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಅವರ ತಾಯಿ ಕೂಡ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಪಕ್ಷಕ್ಕಾಗಿ ದುಡಿದಿರುವ ಪುಟ್ಟಸ್ವಾಮಿಗೌಡರ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಧ್ವನಿಯಾಗಿ ಎಲ್ಲರೂ ಒಗ್ಗೂಡಿ ಈ ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಮುಖಂಡರಾದ ಡಾ. ದಿನೇಶ್ ಭೈರೇಗೌಡ, ಸಿ.ಡಿ. ದಿವಾಕರ್ ಗೌಡ, ಸುರೇಶ್, ಗಣೇಶ್ ವೇಲಾಪುರಿ, ಅಬ್ದುಲ್ ಬಾಸಿತ್, ರಾಮೇಗೌಡ, ಹೇಮಂತಕುಮಾರ್, ಎಲ್.ಬಿ. ಕೃಷ್ಣ, ಮಧು, ಜಮೀರ್ ಪಾಷಾ ಇತರರಿದ್ದರು.
ಇದಕ್ಕೂ ಮುನ್ನ ತಾಲೂಕಿನ ಗಡಿ ಭಾಗದ ಕಳ್ಳಿಮುದ್ದನಹಳ್ಳಿ ಬಳಿ ಜಮಾಯಿಸಿದ್ದ ಅಪಾರ ಕಾರ್ಯಕರ್ತರು ಹಾಗೂ ಬೆಂಬಲಿಗರು ಕೃಷ್ಣೇಗೌಡ ಅವರಿಗೆ ಭವ್ಯ ಸ್ವಾಗತ ಕೋರಿ ಬೈಕ್ ರ‍್ಯಾಲಿ ಮೂಲಕ ಪಟ್ಟಣಕ್ಕೆ ಬರ ಮಾಡಿಕೊಂಡರು. ಅನಕೃ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಕೃಷ್ಣೇಗೌಡ ಅವರನ್ನು ಹೆಗಲ ಮೇಲೆ ಹೊತ್ತು ಹೂಮಳೆ ಸುರಿಸಿ ಸಂಭ್ರಮಿಸಿದರು. ಅನಕೃ ಪ್ರತಿಮೆಗೆ ಮಾಲರ್ಪಣೆ ಮಾಡಿದ ಕೃಷ್ಣೆಗೌಡರು ಮೆರವಣಿಗೆ ಮೂಲಕ ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
0 Comments