ಅರಕಲಗೂಡು: ತಾಲೂಕಿನ ಬಸವಾಪಟ್ಟಣದ ಶ್ರೀ ಮಹಾ ವಿದ್ಯಾ ಗಣಪತಿ ಯುವಕರ ಸಂಘದಿಂದ ಉಪ್ಪಾರ ಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿ ವಿಸರ್ಜನಾ ಮೆರವಣಿಗೆ ಬಹಳ ವೈಭವದಿಂದ ನೆರವೇರಿತು.
ಕಳೆದ 23 ದಿನಗಳ ಕಾಲ ನಡೆದ ಗಣೇಶೊತ್ಸವದಲ್ಲಿ ವಿವಿಧ ಪೂಜಾ ಕಾರ್ಯಗಳು ಹಾಗೂ ಮನರಂಜನಾ ಕಾರ್ಯಗಳನ್ನು ಆಯೋಜಿಸಲಾಗಿತ್ತು. ಗಣಪತಿ ವಿಸರ್ಜನೆಗೆ ಮುನ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.
ಬಳಿಕ ಅಲಂಕರಿಸಿದ ಮಂಟಪದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಕೀಲುಕುದುರೆ, ಗಾರುಡಿ ಗೊಂಬೆ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಹಾಗೂ ಸ್ಥಬ್ದ ಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು. ಯುವಕರು ಕುಣಿದು ಸಂಭ್ರಮಿಸಿದರು. ರಸ್ತೆಯ ಎರಡೂ ಬದಿಗಳಲ್ಲಿ ಜಮಾಯಿಸಿದ್ದ ಜನರು ಕಲಾ ತಂಡಗಳ ಪ್ರದರ್ಶನ ವೀಕ್ಷಿಸಿ ಗಣಪತಿಗೆ ಹಣ್ಣು,ಕಾಯಿ ಸಮರ್ಪಿಸಿದರು. ಕೊಣನೂರು ಪೊಲೀಸರು ಬಂದೊಬಸ್ತ್ ಏರ್ಪಡಿಸಿದ್ದರು.
ಗ್ರಾಪಂ ಮಾಜಿ ಅಧ್ಯಕ್ಷ ಮಹೇದ್ರ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಬಿ.ಸಿ. ವೀರೇಶ್, ಡಾ. ಅನಿಲ್ ಕುಮಾರ್, ಉದ್ಯಮಿ ಬಾಲಣ್ಣ, ಹರೀಶ್, ಗೋವಿಂದ, ರಾಮು, ಅಪ್ಪಸ್ವಾಮಿ, ಕಾಂತರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಜಗದೀಶ್, ನಟರಾಜ, ಅಭಿಷೇಕ್, ಶರತ್, ಮಹೇಶ್, ಪುಟ್ಟ, ಪುನೀತ್ , ರಕ್ಷಿತ, ಚರಣ್, ಮಂಜುನಾಥ್, ಹರೀಶ್, ಗಿರೀಶ್, ಮಹಾದೇವ, ಮಣಿ, ಶ್ರೀನಿವಾಸ್ ಇತರರು ಇದ್ದರು.
ಮೆರವಣಿಗೆ ನಂತರ ಶ್ರೀ ಕಾಲುವೆ ಅಮ್ಮ ದೇವಸ್ಥಾನ ಬಳಿ ಗಣಪತಿ ಮೂರ್ತಿಯನ್ನು ಕಾಲುವೆಯಲ್ಲಿ ವಿಸರ್ಜಿಸಲಾಯಿತು.
0 Comments