ಹಾಸನ : ಪ್ರತಿಯೊಬ್ಬ ರೈತರಿಗೂ ಅವರ ಬೇಡಿಕೆಗನುಗುಣವಾಗಿ ನಿಗಧಿತ ಸಮಯಕ್ಕೆ ರಸಗೊಬ್ಬರಗಳನ್ನು ಪೂರೈಕೆ ಮಾಡುವಂತೆ ಶಾಸಕರಾದ ಹೆಚ್.ಡಿ ರೇವಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಹಾಸನ ಜಿಲ್ಲೆಯ ಸಹಕಾರ ಸಂಘಗಳ ಮೂಲಕ ರಸಗೊಬ್ಬರ ಸರಬರಾಜು ವಿತರಣೆ ಕುರಿತು ಸಭೆ ನಡೆಸಿ ಮಾತನಾಡಿದ ಅವರು ಪ್ರತಿ ತಾಲ್ಲೂಕಿಗೆ ರಸಗೊಬ್ಬರ ವಿತರಕರನ್ನು ನೇಮಿಸಿ ಯಾವುದೇ ವ್ಯತ್ಯಾಸ, ಅವ್ಯವಹಾರ ನಡೆಯದಂತೆ ತಡೆಯಲು ಸೂಕ್ತ ಕ್ರಮವಹಿಸಿ ಎಂದರು.
ಎಲ್ಲಾ ರಸಗೊಬ್ಬರ ಮಾರಾಟಗಾರರು ವಿತರಕರಿಗೆ ಶೇ.100 ರಷ್ಟು ಪರವಾನಗಿ ನೀಡಿದರೆ ರೈತರು ನೇರ ಖರೀದಿಗೆ ಸಹಾಯವಾಗುತ್ತದೆ ಎಂದು ಶಾಸಕರು ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ರೈತರನ್ನು ಒಂದೆಡೆ ಸೇರಿಸಿ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿ ಹೆಚ್.ಡಿ ರೇವಣ್ಣ ಸಲಹೆ ನೀಡಿದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಯವರು ಸಭೆಗಳನ್ನು ನಡೆಸಿ ಸಮನ್ವಯ ಸಾಧಿಸಿ ರೈತರಿಗೆ ಅನುಕೂಲವಾಗುವ ಯೋಜನೆಗಳ ಬೆಳೆ ಪದ್ದತಿಗಳು, ಕೃಷಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಿ ಸವಲತ್ತು ಒದಗಿಸಿ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಒಟ್ಟು 172 ಜನ ಪರವಾನಗಿ ಹೊಂದಿದ್ದು, 130 ಜನ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರೆಲ್ಲರೂ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನಿಗಾವಹಿಸಲು ಸೂಚಿಸಿ ಎಂದರು.
ಉತ್ಪಾದನಾ ಸಂಸ್ಥೆಗಳು ಮುಂದೆ ಬಂದು ಪರವಾನಗಿ ಪಡೆದು ವಿತರಣೆ ನಡೆಸಿದರೆ ಉತ್ತಮ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಮ್, ಹೆಚ್.ಡಿ.ಸಿ.ಸಿ ಬ್ಯಾಂಕ್‍ನ ಅಧ್ಯಕ್ಷರಾದ ನಾಗರಾಜ್, ಕೃಷಿ ಜಂಟಿ ನಿರ್ದೇಶಕರಾದ ರವಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಯೋಗೇಶ್, ಕೃಷಿ ಇಲಾಖೆಯ ಉಪನಿರ್ದೇಶರುಗಳಾದ ಭಾನುಪ್ರಕಾಶ್, ಸುಷ್ಮಾ, ಮತ್ತಿತರರು ಹಾಜರಿದ್ದರು.
ಸಂಪಾದಕ - ರವಿ
0 Comments