ಮೈ.ವಿ. ರವಿಶಂಕರ್ ಗೆಲ್ಲುವ ವಿಶ್ವಾಸವಿದೆ: ಬಿ.ಸಿ. ನಾಗೇಶ್, ಯೋಗಾರಮೇಶ್

ಅರಕಲಗೂಡು: ಬಿಜೆಪಿ ಉತ್ತಮ‌ ಆಡಳಿತ ನೀಡುತ್ತಿದೆ.  ಶಿಕ್ಷಕರ ಅನೇಕ‌ ತೊಂದರೆಗಳು ಹಾಗೂ ಪದವೀಧರರು, ನಿರುದ್ಯೋಗಿಗಳ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಪ್ರಾಮಾಣಿಕವಾಗಿ ಶ್ರಮಿಸಿದೆ. ಹೀಗಾಗಿ ದಕ್ಷಿಣ ಪದವೀಧರರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಮೈ.ವಿ. ರವಿಶಂಕರ್ ಗೆಲ್ಲುವ ವಿಶ್ವಾಸವಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆ, ಬಡ್ತಿ ವಿಚಾರದಲ್ಲಿ ಹಿಂದೆ ಯಾವ ಸರ್ಕಾರಗಳು ಕೈಗೊಂಡಿರದ ದಿಟ್ಟ ನಿಲುವು ತೆಗೆದುಕೊಂಡ‌ ಅವರ ತೊಂದರೆಗಳನ್ನೆಲ್ಲ ನಿವಾರಿಸಲಾಗಿದೆ. ಏಕಕಾಲದಲ್ಲಿ  23 ಸಾವಿರ ಶಿಕ್ಷಕರ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಮಾಡಿದೆ. ಅಗತ್ಯವಿರುವಷ್ಟು ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ.  ಈ ಬಾರಿ ಮಕ್ಕಳಿಗೆ ಗುಣಮಟ್ಟದ‌ ಶಿಕ್ಷಣ ನೀಡುವ ನಿಟ್ಟಿನಲ್ಲಿ ಯಾವ ಇಲಾಖೆಯಲ್ಲೂ ಆಗದಷ್ಟು ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಹೀಗಾಗಿ ಪ್ರಜ್ಞಾವಂತರ ಮತದಾರರು ಬಿಜೆಪಿ ಅಭ್ಯರ್ಥಿ ಬೆಂಬಲಿಸಲಿದ್ದಾರೆ. ಕಳೆದ ಸಲ ತೀರ ಕಡಿಮೆ ಅಂತರದಲ್ಲಿ‌ ಸೋತ ನಂತರವೂ ಮತದಾರರದಿಗೆ ಉತ್ತಮ ಸಂಪರ್ಕ ಬೆಳೆಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಿರುವ ರವಿಶಂಕರ್ ಅವರು ಈ ಬಾರಿ ಗೆಲುವು  ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳಿವೆ. ಈ ಪೈಕಿ 3800 ಶಾಲೆಗಳಲ್ಲಿ ಹತ್ತು ಮಕ್ಕಳಿಗಿಂತ ಕಡಿಮೆ ಹಾಜರಾತಿ ಇದೆ. 384 ಶಾಲೆಗಳಲ್ಲಿ‌ ಶೌಚಗೃಹಗಳ ಕೊರತೆ ಇದೆ. ನಿರ್ವಹಣೆ ಸಾಧ್ಯವಾಗದೆ ಶೌಚಗೃಹಗಳು ದುಸ್ಥಿತಿಯಲ್ಲಿವೆ. ಎಸ್.ಡಿ.ಎಂ.ಸಿ.ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಲೆಗಳಲ್ಲಿ ಮಕ್ಕಳ‌ ಶೈಕ್ಷಣಿಕ ಬೆಳವಣಿಗೆ ಮತ್ತಷ್ಟು ಸುಧಾರಿಸಿದೆ. ಮಕ್ಕಳಿಗೆ ಮುಂದಿನ ದಿನಗಳಲ್ಲಿ ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸರ್ಕಾರದ ಬೊಕ್ಕಸವನ್ನು ಲೂಟಿ ಹೊಡೆಯುವುದರಲ್ಲಿ ನಿಸ್ಸೀಮರಾದ ಕಾಂಗ್ರೆಸ್ ನವರು ಬಿಜೆಪಿ ಸರ್ಕಾರದ ಆಡಳಿತದ ವಿರುದ್ದ ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ. ಪಠ್ಯ ಪರಿಷ್ಕರಣೆ ಕಾರ್ಯ ಪ್ರಾಮಾಣಿಕವಾಗಿ ನಡೆದಿದೆ. ಮಕ್ಕಳಲ್ಲಿ‌ ದೇಶಾಭಿಮಾನ, ಕನ್ನಡ ಪ್ರೇಮ ಬಿತ್ತಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಪಠ್ಯಗಳನ್ನು ಪರಿಷ್ಕರಿಸಲಾಗಿದೆ. ಕುವೆಂಪು, ಮೈಸೂರು ಮಹಾರಾಜರ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾಂಗ್ರೆಸ್ ನವರಂತೆ ಒಂದು ವರ್ಗದವರನ್ನು ಓಲೈಸುವ ಕೆಲಸ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಿಂಚಿತ್ತೂ ಆಗಿಲ್ಲ. ವಿರೋಧ ಪಕ್ಷದವರ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಬಿಜೆಪಿ ಮುಖಂಡರಾದ ಎಚ್. ಯೋಗಾರಮೇಶ್, ವಿಶ್ವನಾಥ್, ಪಿ.ಟಿ. ಕೇಶವೇಗೌಡ, ಚಂದ್ರಶೇಖರ್, ಸೂರ್ಯ, ಲೋಕೇಶ್ ಗೋಷ್ಠಿಯಲ್ಲಿದ್ದರು.

Post a Comment

0 Comments