ವಿಶ್ವ ಶ್ರೇಷ್ಠತೆಯ ಸಕಲ ‌ಜ್ಞಾನ ಗಳಿಕೆಗೆ ರಂಗಕಲೆ ಕಲಿಕೆ ಅನಿವಾರ್ಯ: ಬೆಳವಾಡಿಯಲ್ಲಿ‌ ಮಂಡ್ಯ ರಮೇಶ್ ಗುಣಗಾನ

ಅರಕಲಗೂಡು: ಶೈಕ್ಷಣಿಕವಾಗಿ ಸಮಾಜಕ್ಕೆ ಮೌಲ್ಯಯುತವಾದ ಕಲಿಕಾ ಮಾದರಿ ಶಿಕ್ಷಣ ನೀಡುವಲ್ಲಿ ವಿಫಲವಾದ ಕಾರಣ ಮಕ್ಕಳಲ್ಲಿ ಸಂಸ್ಕೃತಿ ಬೆಳವಣಿಗೆಗೆ ಹಿನ್ನಡೆಯಾಗಿದೆ. ಆದರೆ ಮಕ್ಕಳು ಎಲ್ಲ ಗುಣಗಳನ್ನು ಅಭ್ಯಸಿಸಿ ಸಕಲ ಜ್ಞಾನ ಗಳಿಸುವ ಮೂಲಕ ಸಮಾಜವನ್ನು ತಿದ್ದುವ ಶ್ರೇಷ್ಠತೆಯನ್ನು  ರಂಗಕಲೆ ಕಲಿಸುತ್ತದೆ ಎಂದು ಚಿತ್ರನಟ ರಂಗಕರ್ಮಿ ಮಂಡ್ಯ ರಮೇಶ್ ತಿಳಿಸಿದರು.

ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಶತಮಾನದ ಸಂಭ್ರಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಂಗ ಕಲೆ ತರಬೇತಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದ ಕಲಾ ಪ್ರಪಂಚದಲ್ಲಿ ರಂಗಕಲೆ‌ ಬಹು ಶ್ರೇಷ್ಠತೆಗೆ ಹೆಸರಾಗಿದೆ. ತರಗತಿಗಳಲ್ಲಿ ಮಕ್ಕಳು ಯಾವುದನ್ನು ಕಲಿಯಬೇಕು ಎನ್ನುವದನ್ನು ತಿಳಿಸುತ್ತದೆ. ಯಾವುದು ಮುಖ್ಯ ಅಮುಖ್ಯ ಎನ್ನುವುದನ್ನು‌ ಅರ್ಥ ಮಾಡಿಸಿ ರಂಗಕಲೆ ಅಭಿನಯದಲ್ಲಿ ಪ್ರತಿ ಪಾತ್ರಗಳಿಗೆ ಜೀವಸತ್ವ ತುಂಬುತ್ತದೆ. ಕನ್ನಡದ ಸಾರ್ವಭೌಮತೆಯನ್ನೂ ಗಟ್ಟಿಗೊಳಿಸಬೇಕಿದೆ ಎಂದರು.

ಇತಿಹಾಸ, ಪುರಾಣ, ನಾಟಕಗಳು ಮನುಷ್ಯನ ನೈಜ ಬದುಕನ್ನು ಅರ್ಥಮಾಡಿಸು ಸಾಧನಗಳು. ಹಿಂದಿನವರು ಕಲಿಸುತ್ತಿದ್ದ ಪೌರಾಣಿಕ ನಾಟಕಗಳ ಹಿಂದೆ ವಿಜ್ಞಾನ, ಸಾಮಾಜಿಕ ಜ್ಞಾನ‌ ಅಡಕವಾಗಿದ್ದು ಜನತೆಗೆ ಆದರ್ಶಪ್ರಾಯವಾಗಿತ್ತು ಎಂದು ಹೇಳಿದರು.
ಶತಮಾನದ ಸಂಭ್ರಮದಲ್ಲಿ‌ ಶಾಲೆಯಲ್ಲಿ ರಂಗ ತರಬೇತಿಗಳನ್ನು‌ ಆರಂಭಿಸಿ ಗ್ರಾಮೀಣ ಭಾಗದಲ್ಲಿ‌ ರಂಗ ಚಳವಳಿ ಹುಟ್ಟುಹಾಕಲು ಮುಂದಾಗಿರುವುದು ಶ್ಲಾಘನೀಯ. ರಂಗ ತರಬೇತಿ ಕಲೆ ಕಲೆಯುವ ಶಾಲೆಯ ಮಕ್ಕಳು ಒಂದೆರಡು ದಿನ ಗೈರಾದರೆ ತರಗತಿಯಿಂದ ವಜಾಗೊಳಿಸಲಾಗುವುದು. ಮಕ್ಕಳು ಇದಕ್ಕೆ ಆಸ್ಪಸ ನೀಡಬಾರದು. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಹೆಚ್ಚಿನ ಪ್ರೇರಣೆ ನೀಡಬೇಕು ಎಂದು ಮನವಿ ಮಾಡಿದರು.

ಸಂಸ್ಕೃತಿ ಚಿಂತಕ ಎಚ್.ಕೆ. ವಿವೇಕಾನಂದ ಮಾತನಾಡಿ, ರಂಗ ಕಲೆ ನಾಟಕ ಅಭಿನಯ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಾಂಸ್ಕೃತಿಕ ಅಭಿನಯವೂ ಒಳ್ಳೆ ಪಾಠ ಕಲಿಸುತ್ತದೆ. ಜ್ಞಾನ ಪ್ರಸರಣ ಹಾಗೂ ಸಮಾಜದ ಬೆಳವಣಿಗೆಗೆ ರಂಗಕಲೆ ಬಹುದೊಡ್ಡ ಪಾತ್ರ ವಹಿಸುತ್ತದೆ ಎಂದರು. 
ವ್ಯವಹಾರಿಕವಾಗಿ ಕಷ್ಟಪಟ್ಟು ಬೆಳೆ ಬೆಳೆಯುವ ಅನ್ನದಾತನಿಗೆ ಪ್ರತಿ ಹಂತದಲ್ಲೂ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಎಲ್ಲರೂ ಜಾಗೃತರಾಗಬೇಕು. ಮುಖ್ಯವಾಗಿ ಶಿಕ್ಷಕರು ಮಕ್ಕಳಿಗೆ ವೈಚಾರಿಕ ವೈಜ್ಞಾನಿಕ ಪ್ರಜ್ಞೆ ಕಲಿಸುವ ಮಾರ್ಗದರ್ಶಕ ರಾಗಿ ಕರ್ತವ್ಯ ನಿರ್ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ತಾಪಂ ಮಾಜಿ‌ ಸದಸ್ಯ ನಿಂಗೇಗೌಡ ಮಾತನಾಡಿ, ಶತಮಾನದ ಶಾಲೆಯ ಏಳಿಗೆಗೆ ಶ್ರಮಿಸಿದವರ ಪರಿಶ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಹಳೆಯ ವಿದ್ಯಾರ್ಥಿ ಸಂಘದ ನವೀನ್ ಮಾತನಾಡಿ, ರಂಗ ಕಲೆ ತರಗತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾದಂಬರಿ ಸಾರ್ವಭೌಮ ಅನಕೃ ಹೆಸರಿನಲ್ಲಿ ಶತಮಾನದ ಭವನ ಸ್ಥಾಪಿಸಲು ಸಹಕಾರ ಕೋರಿದರು.

ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ದಾನಿ ಕೃಷ್ಣೇಗೌಡ, ಗ್ರಾಪಂ ಸದಸ್ಯೆ ಶೈಲಜಾ, ಶಾಲಾಭಿವೃದ್ಧಿ ಸಮಿತಿಯ ಕೃಷ್ಣೇಗೌಡ, ಚಂದ್ರೇಗೌಡ, ಇಸಿಒ ಸೋಮಶೇಖರ್, ಬಿಆರ್ ಸಿ ಜಗದೀಶ್, ಪ್ರಾಂಶುಪಾಲ ಸುದೀಪ್, ಮುಖ್ಯ ಶಿಕ್ಷಕರಾದ ಕೃಷ್ಣಮೂರ್ತಿ, ಸುಮಿತ್ರ, ಸಹ ಶಿಕ್ಷಕರು, ಗ್ರಾಮಸ್ಥರು ಇದ್ದರು.

ಅಶ್ವಿನಿ ತಂಡದ ಅಚಲ ಪರಮೇಶ್ವರಿ ತಂಡದವರು ಗೀತ ಗಾಯನ ಪ್ರಸ್ತುತ ಪಡಿಸಿದರು. 
ರಂಗಕರ್ಮಿ ದೇವಾನಂದ ವರಪ್ರಸಾದ್, ಮಂಡ್ಯ ರಮೇಶ್ ಅವರು ರಂಗ ಕಲೆಗಳನ್ನು ಪ್ರದರ್ಶಿಸಿ ಜನಮನ ರಂಜಿಸಿದರು.

Post a Comment

0 Comments