ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣದಲ್ಲಿ ಮೇ 31 ಮತ್ತು ಜೂನ್ 1ರಂದು ನಡೆಯುವ ಶ್ರೀ ಮಾರಿಕಾಂಭ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆಗಳು ಸಾಗಿದ್ದು ಗ್ರಾಮ ಮದುವಣಗಿತಿಯಂತೆ ಸಿಂಗಾರಗೊಂಡಿದೆ.
ಐದು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಭ ಜಾತ್ರಾ ಮಹೋತ್ಸವದ ಅಂಗವಾಗಿ ಈಗಾಗಲೇ ಹಲವು ಧಾರ್ಮಿಕ ಪೂಜಾ ಕಾರ್ಯಗಳು ಚಾಲನೆ ಪಡೆದುಕೊಂಡಿವೆ. ದೇವತೆ ಸನ್ನಿಧಿಯಲ್ಲಿ ದುಬ್ಬಿ ಕಟ್ಟುವ ಪೂಜೆ, ಶ್ರೀ ಹೊಂಬಾಳಮ್ಮ ಪರಾವು ನೆರವೇರಿಸಲಾಗಿದೆ. ಶುಕ್ರವಾರ ರಾತ್ರಿ ಉಡಿಸಲಮ್ಮ ಬಂಡಿಹಬ್ಬ ಅತ್ಯಂತ ಸಡಗರ ಸಂಭ್ರಮಗಳಿಂದ ಜರುಗಿತು. ಶ್ರೀ ಮಾರಿಕಾಂಭ ದೇವಸ್ಥಾನದಿಂದ ಉಡಿಸಲಮ್ಮ ದೇವಸ್ಥಾನ ತನಕ ಭಕ್ತರು ಬಂಡಿ ಎಳೆದು ಭಕ್ತಿ- ಭಾವ ಅರ್ಪಿಸಿದರು. ದೇವಸ್ಥಾನ ಮುಂಭಾಗ ನಡೆದ ಕೊಂಡೋತ್ಸವದಲ್ಲಿ ಭಕ್ತರು ಉರಿಯುತ್ತಿದ್ದ ಕೆಂಡ ಹಾಯ್ದು ಭಕ್ತಿ ಪ್ರದರ್ಶಿಸಿದರು.
ಮೇ. 31ರಂದು ಬೆಳಗ್ಗೆ ದೇವತೆಗೆ ಅಭಿಷೇಕ, ದುರ್ಗಾ ಹೋಮ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ರಾತ್ರಿ ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ಸಭಾ ಕಾರ್ಯಕ್ರಮ ಜರುಗಲಿದೆ.
ನಂತರ ಕೆಲಗಳಲೆ ಗ್ರಾಮದಿಂದ ಸಿಂಬಿ ತರುವುದು ಹಾಗೂ ಮದ್ದು ಗುಂಡುಗಳ ಪಟಾಕಿ ಸಿಡಿಸಿ ಭಂಡಾರ ಇಡಿಯುವುದು ಮತ್ತು ವಿಶ್ವಕರ್ಮ ಸಮುದಾಯ ಭಕ್ತರ ಮನೆಯಿಂದ ತಿದ್ದಮ್ಮನವರನ್ನು ಮೆರವಣಿ ಮೂಲಕ ಮೂಲ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಗಳು ನೆರವೇರಲಿವೆ.
ಜೂನ್ 1ರಂದು ಬೆಳಗ್ಗೆ ಘಟಾ ತರುವ ಸೇವೆ ನಂತರ ವಿವಿಧ ಕಲಾ ತಂಡಗಳು, ಡೊಳ್ಳು ಕುಣಿತ, ನಾಸಿಕ ಡೋಲು, ಮಂಗಳವಾದ್ಯಗೋಷ್ಠಿಯೊಂದಿ ಘಟಾ ಮೆರವಣಿಗೆ ನಡೆಸಿ ಹಣ್ಣುಕಾಯಿ ಸೇವೆ ಸಲ್ಲಿಸಲಾಗುವುದು. ಸಂಜೆ ಅಮ್ಮನವರ ಮೆರವಣಿಗೆ ಮೂಲಕ ವಿಸರ್ಜಿಸಲಾಗುವುದು.
ಜೂನ್ 4ರಂದು ಬೆಳಗ್ಗೆ ಶ್ರೀ ಹರಿಸೇವೆ ಹಾಗೂ ಮಧ್ಯಾಹ್ನ ಸಾಮೂಹಿಕ ಊಟದ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ.
ಸಿದ್ದತೆ ಪರಿಶೀಲನೆ: ಮಲ್ಲಿಪಟ್ಟಣದಲ್ಲಿ ನಡೆಯುವ ವೈಭವದ ಶ್ರೀ ಮಾರಿಕಾಂಭ ಜಾತ್ರಾ ಮಹೋತ್ಸವದ ಯಶಸ್ವಿಗೆ ಗ್ರಾಮಸ್ಥರು ಅದ್ದೂರಿ ಸಿದ್ದತೆ ಕೈಗೊಂಡಿದ್ದಾರೆ. ಶುಕ್ರವಾರ ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಸದಸ್ಯ ನಾಗರಾಜು, ಪಿಡಿಒ ರಂಗಸ್ವಾಮಿ ಅವರು ಸಿದ್ದತಾ ಕಾರ್ಯಗಳನ್ನು ಪರಿಶೀಲಿಸಿದರು.
ದೇವಸ್ಥಾನ ಮುಂಭಾಗ ಸ್ವಚ್ಚತಾ ಕಾರ್ಯ ನಡೆಸಿ ಸಮತಟ್ಟುಗೊಳಿಸಿ ಚರಂಡಿ ನಿರ್ಮಿಸಿ ಶುಚಿತ್ವಕ್ಕೆ ಒತ್ತು ನೀಡಲಾಗಿದೆ. ಸಾವಿರಾರು ಭಕ್ತರಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.
ಗ್ರಾಮದಲ್ಲಿ ವಿದ್ಯತ್ ದೀಪಾಲಂಕಾರ ಕೈಗೊಂಡಿದ್ದು ಸಡಗರ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
0 Comments