ಅರಕಲಗೂಡು: ದೇವರ ಸಮಾನರಾಗಿದ್ದ ಮಕ್ಕಳಿಗೆ ದಾಸೋಹದ ಜತೆಗೆ ಶಿಕ್ಷಣ, ಸಂಸ್ಕಾರ ನೀಡಿ ಸಮಾಜಕ್ಕೆ ಬೆಳಕಾಗಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆದರ್ಶ ಗುಣಗಳನ್ನು ಎಲ್ಲರಿಗೂ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕಿದೆ ಎಂದು ಮಾಜಿ ಸಚಿವ ಎ. ಮಂಜು ನುಡಿದರು.
ತಾಲೂಕಿನ ಹೊಳಲಗೋಡು ಸರ್ಕಲ್ ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದ ಮಹಾನ್ ಸಂತರು, ಗುರುಗಳು ಅನೇಕ ಸತ್ಕಾರ್ಯಗಳನ್ನು ಮಾಡಿರಬಹುದು.
ಆದರೆ ಸಿದ್ದಗಂಗಾ ಶ್ರೀಗಳ ಸೇವಾ ಕಾರ್ಯಗಳು ಇನ್ನಷ್ಟು ವಿಭಿನ್ನ. ಸಾವಿರಾರು ಮಕ್ಕಳಿಗೆ ಜಾತ್ಯಾತೀತವಾಗಿ ದಾಸೋಹ ನಡೆಸಿ ವಿದ್ಯೆ ಕಲಿಸಿ ಉನ್ನತ ಭವಿಷ್ಯ ರೂಪಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಮನುಕುಲಕ್ಕೆ ಉತ್ತಮ ಸಂಸ್ಕಾರ ಪದ್ದತಿಗಳನ್ನು ರೂಢಿಸಿ ಜನ್ಮಾಂತರದ ಪೀಳಿಗೆ ವರೆಗೆ ಅಳಿಯದಂತೆ ಬಿಟ್ಟು ಹೋಗಿದ್ದಾರೆ. ಮಹಾನ್ ದೈವತ್ವ ಸ್ವರೂಪದ ಶ್ರೀಗಳನ್ನು ಸ್ಮರಿಸಿದರೆ ಸಮಾಜದಲ್ಲಿ ಶಾಂತಿ ಸುಭೀಕ್ಷೆ ನೆಲೆಸಿ ಸಾಮರಸ್ಯ ವೃದ್ಧಿಸುತ್ತದೆ. ಇವರ ಕಾಯಕ ತತ್ವಗಳನ್ನು ಪಾಲಿಸುವ ಪ್ರವೃತ್ತಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ, ಜಿಪಂ ಮಾಜಿ ಸದಸ್ಯ ಎಸ್.ಪಿ. ರೇವಣ್ಣ ಮತ್ತಿತರ ಗಣ್ಯರು ಇದ್ದರು.
ಶ್ರೀಗಳ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಸುತ್ತಲಿನ ಸಹಸ್ರಾರು ಭಾಗವಹಿಸಿ ನಮನ ಸಲ್ಲಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ಅನ್ನ ದಾಸೋಹ ನಡೆಯಿತು.
0 Comments