ಅರಕಲಗೂಡು: ವಕೀಲರು ನಿರಂತರ ಕಲಿಕೆಯಲ್ಲಿ ತೊಡಗಿದರೆ ಕ್ಲಿಷ್ಟಕರವಾದ ಸಿವಿಲ್ ಪ್ರಕರಣಗಳು ಸೇರಿದಂತೆ ನ್ಯಾಯಾಲಯದ ಕಲಾಪಗಳಲ್ಲಿ ಕಕ್ಷಿದಾರರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ಸುಲಭ ಸಾಧ್ಯವಾಗಲಿದೆ ಎಂದು ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಮುಜಫರ್ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘದ ಸಹಯೋಗದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಕೀಲರು ಓದುವುದು ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿಯೂ ವಕೀಲರಿಗೆ ಇರುವ ಗೌರವ ಕಡಿಮೆಯಾಗುತಿರುವುದು ಕಂಡುಬರುತ್ತಿದೆ.
ವಕೀಲರು ಗೌರವಯುತ ನಡವಳಿಕೆ ರೂಢಿಸಿಕೊಂಡು ನ್ಯಾಯಾಲಯದ ಕಲಾಪಗಳಿಗೆ ಸಂಬAಧಿಸಿದAತೆ ಹೆಚ್ಚಿನ ಜ್ಞಾನಾರ್ಜನೆ ಮೈಗೂಡಿಸಿಕೊಳ್ಳವುದು ಅಗತ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಹರೀಶ್ ಮಾತನಾಡಿ, ನ್ಯಾಯಧಾನ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಕೀಲರು ಎರಡು ಕಕ್ಷಿದಾರರನ್ನು ಪ್ರತಿನಿಧಿಸುತ್ತಿದ್ದರೂ, ಸತ್ಯ ಮರೆಮಾಚಿ ಅನ್ಯಾಯಕ್ಕೆ ಎಡೆ ಮಾಡಿಕೊಡದೆ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸ ಮಾಡುವುದೇ ಮುಖ್ಯ ಉದ್ದೇಶವಾಗಬೇಕು ಎಂದರು.
ನ್ಯಾಯಧೀಶೆ ಪ್ರೀತಿ ಎಲ್ ಮಳವಳ್ಳಿ ಮಾತನಾಡಿ, ಸಮಾಜದಲ್ಲಿ ವಕೀಲ ವೃತ್ತಿಗೆ ಉನ್ನತವಾದ ಸ್ಥಾನವಿದೆ. ವೈದ್ಯರು ಒಬ್ಬರ ಜೀವ ಉಳಿಸಿದರೆ ವಕೀಲರು ಒಂದು ಕುಟುಂಬವನ್ನು ಕಾಪಾಡುವ ಹೊಣೆಗಾರಿಕೆ ನಿರ್ವಹಿಸುತ್ತಿದ್ದು ಇದು ವೃತ್ತಿ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಗೋವಿಂದ ಕಾರ್ಯದರ್ಶಿ ದೊರೆಸ್ವಾಮಿ, ಖಜಾಂಚಿ ಆನಂದ ಹಾಗೂ ವಕೀಲರು ಇದ್ದರು.
0 Comments