ಕಾಂಗ್ರೆಸ್ ನಿಂದ ಸಾಮಾಜಿಕ ನ್ಯಾಯ; ಜೆಡಿಎಸ್- ಬಿಜೆಪಿಗೆ ಆಡಳಿತ ನಡೆಸಲು ಗೊತ್ತಿಲ್ಲ: ಸಿದ್ದರಾಮಯ್ಯ

ಪ‌‌‌ಪಂ ಸದಸ್ಯ ಪ್ರದೀಪ್ ಕುಮಾರ್ ಮದುವೆ ಆರತಕ್ಷತೆ ನಿಮಿತ್ತ ಆಗಮಿಸಿದ‌ ಸಿದ್ದರಾಮಯ್ಯ

ಅರಕಲಗೂಡು: ಪರಿಶಿಷ್ಟ ಜಾತಿ, ಪಂಗಡ ಹಾಗೂ ಮಹಿಳಾ ಮೀಸಲಾತಿ ಜಾರಿಗೊಳಿಸಿ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಅಧಿಕಾರ ನೀಡಿ ಸಾಮಾಜಿಕ ನ್ಯಾಯ ಒದಗಿಸಿದೆ. ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ದವಾಗಿ ವರ್ತಿಸಿದೆ. ಪಂಚಾಯಿತಿಗಳಿಗೆ ಅಗತ್ಯ ನೆರವು ಸಹ ನೀಡದ ಬಿಜೆಪಿ ಮತ್ತು ಜೆಡಿಎಸ್‌ಗೆ ವಿಧಾನ ಪರಿಷÀತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳ ಮತ ಕೇಳುವ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬುಧವಾರ ಆಗಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಜಾರಿಯಾಗಿದ್ದ ಅಹಿಂದ ವರ್ಗ ಮತ್ತು ಮಹಿಳಾ ಮೀಸಲಾತಿಯನ್ನು ಬಿಜೆಪಿ ವಿರೋಧಿಸಿತ್ತು. ಮತದಾರರು ಇದನ್ನು ಅರಿಯಬೇಕು ಎಂದರು.

ಕಾAಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೊಳಿಸಿದ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಗ್ರಾಪಂಚಾಯಿತಿಗಳು ಉಸಿರಾಡುತ್ತಿದೆ. ಮೋದಿ ಪ್ರಧಾನಿಯಾದ ನಂತರ ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿ ಗಳಿಗೆ ಹೆಚ್ಚಿನ ಅನುದಾನ ನೀಡಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಹಣ ಕೂಡ ಕೊಡಲು ಸಾಧ್ಯವಾಗುತ್ತಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ 15 ಲಕ್ಷ ಮನೆಗಳನ್ನು ನೀಡಿದ್ದೆ. ಎಚ್.ಡಿ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಮೂರೂವರೆ ವರ್ಗಗಳ ಅವಧಿಯಲ್ಲಿ ಬಡವರುಗೆ ಒಂದೇ ಒಂದು ಸೂರು ಒದಗಿಸಲಾಗಿಲ್ಲ. ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಏನು ಮಾಡಬೇಕು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ಬಿಜೆಪಿ ಆಡಳಿತ ವ್ಯವಸ್ಥೆ ಲಾಕ್ ಮಾಡಿದರೆ ಜನ ಚುನಾವಣೆಯಲ್ಲಿ ಆ ಪಕ್ಷವನ್ನೆ ಲಾಕ್ ಮಾಡುತ್ತಾರೆ ಎಂದರು.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕು. ಆದರೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಚುನಾವಣೆ ಮುಂದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಲಂಚಗುಳಿತನ ತಾಂಡವಾಡುತ್ತಿದೆ. ನನ್ನ ಅಧಿಕಾರದ ಅವಧಿಯಲ್ಲಿ ಒಂದು ಪೈಸೆ ಲಂಚ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವೆ. ಬಿಜೆಪಿ ಸರ್ಕಾರದಲ್ಲಿ ಪರ್ಸೆಂಟೇಜ್ ನೀಡಿ ಅನುದಾನ ತರುವಂತಾಗಿದ್ದು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ನಾನು ತಿನ್ನಲ್ಲ, ತಿನ್ನುವವರಿಗೆ ಅವಕಾಶವಿಲ್ಲ ಎನ್ನುತ್ತಿದ್ದ ಮೋದಿ ದುರಾಡಳಿತ ಮತದಾರರಿಗೆ ಅರಿವಾಗಿದೆ. ಕೇಂದ್ರದ ಬೆಲೆ ಏರಿಕೆ ನೀತಿ ಸಹಿಸಿಕೊಳ್ಳಲಾಗುತ್ತಿಲ್ಲ. ಜನ ಬದಲಾವಣೆ ಬಯಸಿದ್ದು ಕಾಂಗ್ರೆಸ್ ಅಧಿಕಾರ ಬರುವ ಕುರಿತು ಚರ್ಚೆ ನಡೆಯುತ್ತಿದೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಲ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. 6 ಕ್ಷೇತ್ರಗಳಿಗೆ ಜೆಡಿಎಸ್ ಒಂದೇ ಕೋಮಿನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಮೈಸೂರಿನಲ್ಲಿ ಮಡಿವಾಳ ಸಮಾಜದ ಒಂದು ಕ್ಷೇತ್ರ ಹೊರತು ಪಡಿಸಿದರೆ ಬಿಜೆಪಿ ಇತರೆ ಎಲ್ಲ ಕ್ಷೇತ್ರಗಳಿಗೆ ಮೇಲ್ವರ್ಗದವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಎಲ್ಲ ವರ್ಗದವರಿ ಅವಕಾಶ ನೀಡಿದೆ. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಹಾಸನದಲ್ಲೂ ನೂರಕ್ಕೆ ನೂರರಷ್ಟು ನಮ್ಮ ಅಭ್ಯರ್ಥಿಯೇ ಗೆಲ್ಲವು ಸಾಧಿಸಲಿದ್ದಾರೆ ಎಂದರು.
ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ನಡುವೆ ಯಾವ ರೀತಿಯ ಒಳ ಒಪ್ಪಂದ ಆಗಿದೆ ಗೊತ್ತಿಲ್ಲ.ಆದರೆ ಯಡಿಯೂರಪ್ಪ ಥ್ಯಾಂಕ್ಸ್ ಕುಮಾರಣ್ಣ ಎನ್ನುತ್ತಾರೆ. ನಮ್ಮ ಪಕ್ಷ ಕೋಮುವಾದಿಗಳ ಜತೆ ಹೊಂದಾಣಿಕೆ ಮಾಡಿಕೊಳಲ್ಲ. ಬಿಜೆಪಿ, ಜೆಡಿಎಸ್ ಬಗ್ಗೆ ಜನರಿಗೆ ವಾಕರಿಕೆ ಇದೆ. ಈಶ್ವರಪ್ಪ ಮೂರನೇ ಮುಖ್ಯಮಂತ್ರಿ ಆಗುತ್ತಾರೆ ಎನ್ನುತ್ತಾರೆ. ಈಶ್ವರಪ್ಪಗೆ ಅಧಿಕಾರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಮೇಲೆಯೇ ನಂಬಿಕೆ ಇಲ್ಲ ಎಂದು ದೂಷಿಸಿದರು.

ಎ. ಮಂಜು ಕಾಂಗ್ರೆಸ್ ಸೇರುವ ಕುರಿತು ಉತ್ತರಿಸಲು ನಿರಾಕರಿಸಿದರು.

ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಎಂ. ಶಂಕರ್, ಎಂಎಲ್ಸಿ ಗೋಪಾಲಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡರಾದ ಎಂ.ಟಿ. ಕೃಷ್ಣೇಗೌqಡ, ಡಾ. ದಿನೇಶ್ ಭೈರೇಗೌಡ, ಎಚ್.ಕೆ. ಜವರೇಗೌಡ, ಶಿವಪ್ಪ, ಡಿ.ಸಿ.ಸಣ್ಣಸ್ವಾಮಿ, ಮಂಜುನಾಥ್ ದತ್ತ ಇತರರಿದ್ದರು.
ಇದಕ್ಕೂ ಮುನ್ನ ಪಟ್ಟಣಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೂಮಳೆ ಸುರಿಸಿ ಸ್ವಾಗತಿಸಿದರು. ಕ್ರೇನ್ ಮೂಲಕ 250 ಕೆಜಿ ತೂಕದ ಬೃಹತ್ ಸೇಬಿನ ಹಾರ ಹಾಕಲಾಯಿತು.

Post a Comment

0 Comments