ಲೆಕ್ಕಪರಿಶೋಧನೆಯಲ್ಲಿ ಆಕ್ಷೇಪಣೆಗೆ ಗುರಿಯಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸೂಚನೆ

 ಹಾಸನ : ಆಡಿಟರ್ ಜನರಲ್ ಹಾಗೂ ರಾಜ್ಯ ಲೆಕ್ಕಪರಿಶೋಧನೆ ವೇಳೆಯ ವರದಿಯಲ್ಲಿ ಆಕ್ಷೇಪಣೆಗೆ ಗುರಿಯಾಗಿರುವ ಅಂಶಗಳಲ್ಲಿ ಹಣ ದುರುಪಯೋಗವಾಗಿದೆ ಕೇವಲ ನಿಯಮ ಪಾಲನೆಯಲ್ಲಿ ಆಗಿರುವ ಸಣ್ಣಪುಟ್ಟ ವ್ಯತ್ಯಾಸಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಸೂಕ್ತ ಸಮಜಾಯಿಷಿ ನೀಡಿ ಇತ್ಯರ್ಥಪಡಿಸಿ ಕೊಳ್ಳುವಂತೆ ಕರ್ನಾಟಕ ವಿಧಾನಮಂಡಲದ ಸಭೆಯಲ್ಲಿ ಮಂಡಿಸಲಾದ ಕಾಗದಪತ್ರಗಳ ಸಮಿತಿ ಅಧ್ಯಕ್ಷರಾದ ಸಾ.ರಾ.ಮಹೇಶ್ ಸೂಚಿಸಿದ್ದಾರೆ.

  ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ವಿಧಾನ ಮಂಡಲದ ಸಭೆಯಲ್ಲಿ ಮಂಡಿಸಲಾದ ಕಾಗದಪತ್ರಗಳ ಸಮಿತಿ ಸಭೆಯಲ್ಲಿ  ಇಲಾಖಾವಾರು ಆಕ್ಷೇಪಣಾ ವರದಿ ಪರಿಶೀಲಿಸಿದ ಅವರು ಹಣದುರುಪಯೋಗ ಪ್ರಕರಣಗಳನ್ನು ಸಹಿಸಲಾಗದು ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ದುರ್ಬಳಕೆ ಇಲ್ಲದೆ ಮಾಡಿದ ಕೆಲಸಗಳನ್ನು ಮುಕ್ತಾಯ ಗೊಳಿಸಬಹುದಾದ ಸೂಕ್ತ ವರದಿ ನೀಡಿ  ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಿ ಎಂದರು.

 ಕೆಲವೊಂದು ಕಟ್ಟಡ ನಿರ್ಮಾಣ ಕಾಮಗಾರಿಗಳ ಉದ್ದೇಶ ವ್ಯತ್ಯಾಸಗಳು ಹಾಗೂ ಅವುಗಳ ಬಳಕೆ ಸ್ವರೂಪದ ಬಗ್ಗೆ ಆಕ್ಷೇಪಣೆಗಳಿವೆ ಆದರೆ ಅದು ಸದ್ಬಳಕೆ ಯಾಗುತ್ತಿದ್ದು ಸಾರ್ವಜನಿಕರ ಅನುಕೂಲಕ್ಕೆ ಮೀಸಲಾಗಿದ್ದರೆ ಆ ಬಗ್ಗೆ ಸೂಕ್ತ ಸಕಾರಣ  ನೀಡಿ ಮುಕ್ತಾಯಗೊಳಿಸಿ ಎಂದರು.

  ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 152 ಆಕ್ಷೇಪಣೆಗಳನ್ನು ವಿವರಣೆ ನೀಡಿ ತೀರ್ಮಾನ ಮಾಡಿಕೊಳ್ಳಲು ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗುವುದು. ಸೂಕ್ಷ್ಮ ದಾಖಲೆಗಳೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅದಕ್ಕೂ ಮುನ್ನ  ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ  ಗಮನಕ್ಕೆ ತರಬೇಕು  ಎಂದು ಅಧಿಕಾರಿಗಳಿಗೆ ತಿಳಿಸಿದರು.

  ಆಕ್ಷೇಪಣೆಗಳನ್ನು ಸರಿಪಡಿಸಿ ಇತ್ಯರ್ಥಪಡಿಸಿ ಕೊಳ್ಳಲು ಮೂರು ತಿಂಗಳ ಕಾಲಾವಕಾಶವನ್ನು ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಎ. ಪರಮೇಶ್ ಅವರು ಸಮಿತಿ ಅಧ್ಯಕ್ಷರನ್ನು ಕೋರಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ವಿಧಾನಸೌಧದ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಬಿ.ಕಾಳೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನ ಸರ್ಕಾರದ ಜಂಟಿ ಕಾರ್ಯದರ್ಶಿ ಸಿದ್ದೇಶ್ ಪೋತಲಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂಪಾದಕ - ರವಿ

Post a Comment

0 Comments