ಆರೋಗ್ಯ ಸೇವಾ ಕಾರ್ಯಗಳಿಗೆ ಆದ್ಯತೆ ಅಗತ್ಯ; ಡಾ. ದಿನೇಶ್ ಭೈರೇಗೌಡ

ಅರಕಲಗೂಡು: ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಆರೋಗ್ಯ ಸೇವಾ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಮೀಸಲಿಡುವ ಮುಖೇನ ಸಮಾಜದಲ್ಲಿ ಬೇರೊಬ್ಬರ ನೆಮ್ಮದಿಯ ಬದುಕಿಗೆ ಆಶಾಕಿರಣವಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹಾಸನದ ಮಣಿ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ತಜ್ಞ ಹಾಗೂ ಕಾಂಗ್ರೆಸ್ ಮುಖಂಡ ಡಾ. ದಿನೇಶ್ ಭೈರೇಗೌಡ ತಿಳಿಸಿದರು.

ತಾಲೂಕಿನ ಕೊಣನೂರು ಲಯನ್ಸ್ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಭಾನುವಾರ ಮಕ್ಕಳ ದಿನಾಚರಣೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣಾರ್ಥ ಹಾಸನದ ಮಣಿ ಸ್ಪೆಷಾಲಿಟಿ ಅಸ್ಪತ್ರೆ, ಲಯನ್ಸ್ ಕ್ಲಬ್, ರೋಟರಿ ಮಿಡ್ ಟೌನ್ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, 
ಆರೋಗ್ಯವಂತ ಮನುಷ್ಯ ಏನನ್ನಾದರೂ ಸಾಧಿಸಬಹುದು. ಹೀಗಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷö್ಯ ವಹಿಸದೆ ಸದಾ ಜಾಗೃತರಾಗಿರಬೇಕು. ಸಮಾಜದ ಜನರ ಆರೋಗ್ಯದ ದೃಷ್ಟಿಯಿಂದ ಇಂತಹ ಮೇಳಗಳನ್ನು ಕೈಗೊಳ್ಳುವುದು ಉತ್ತಮ ಬೆಳವಣಿಗೆಯಾಗಿದೆ. ಎಲ್ಲರೂ ತಮ್ಮ ಆರೋಗ್ಯ ಪರೀಕ್ಷಿಸಿಕೊಂಡು ನೆಮ್ಮದಿ ಜೀವನ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. 
ಮಕ್ಕಳನ್ನು ಸಮಾಜದ ಆಸ್ತಿ ಎಂದು ಭಾವಿಸಿ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ನೆಹರು ಮಕ್ಕಳ ಮೇಲೆ ಅತೀವ ಪ್ರೀತಿ ತೋರಿಸುತ್ತಿದ್ದರು. ಮುಖ್ಯವಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬಿತ್ತಬೇಕು. ನಾಡಿಗೆ ಆದರ್ಶಪ್ರಾಯವಾಗಿದ್ದ ಚಿತ್ರನಟ ಪುನೀತ್ ಅವರ ಸೇವಾ ಕಾರ್ಯಗಳು ಅಜರಾಮರವಾಗಿವೆ. ಉತ್ತಮರ ನಡವಳಿಕೆ, ಸಮಾಜಮುಖಿ ಚಿಂತನೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಬೇಕು. ಪುನೀತ್ ಅವರು 46ನೇ ವಯಸ್ಸಿಗೆ ಕಣ್ಮರೆಯಾಗಿದ್ದು ಅತ್ಯಂತ ಬೇಸರದ ಸಂಗತಿ, ಇವರ ಆದರ್ಶ ಗುಣಗಳು ಸಮಾಜಕ್ಕೆ ಸ್ಪೂರ್ತಿಯಾಗಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಶಶಿಧರ್, ಮಣಿ ಆಸ್ಪತ್ರೆ ನಿರ್ದೇಶಕ ಯತೀಶ್ ಕುಮಾರ್, ಮೆಡಿಕಲ್ ನಿರ್ದೇಶಕಿ ಸೌಮ್ಯಮಣಿ, ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದ ರೇಖಾ, ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಶ್ರೀನಿವಾಸ್, ಡಾ. ಹೇಮಂತ್, ಡಾ. ಸಿದ್ದರಾಮು, ಡಾ. ಕುಮಾರ್, ಡಾ. ರಾಕೇಶ್, ಡಾ. ಸುನೀತಾ, ಡಾ. ಕಿರಣ್, ಡಾ. ಚಂದನ್, ಶಿವಕುಮಾರ್, ಆನಂದಗೌಡ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments