ಅರಕಲಗೂಡು: ಕೋವಿಡ್ ಸೋಂಕು ತಗುಲಿದ ರೋಗಿಗಳ ಪ್ರಾಣ ಕಾಪಾಡುವ ಉದ್ದೇಶದಿಂದ ಸರ್ಕಾರ 1.16 ಕೋಟಿ ರೂ ವೆಚ್ಚದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಬಾಧಿಸಿದ ಒಂದು ಮತ್ತು ಎರಡನೇ ಕರೊನಾ ಅಲೆಯಲ್ಲಿ ಅಪಾರ ಸೋಂಕಿತರಿಗೆ ಆಮ್ಲಜನಕ ಕೊರತೆ ಉಂಟಾಗಿ ತೊಂದರೆ ಅನುಭವಿಸುವಂತಾಗಿತ್ತು. ಸಾರ್ವಜನಿಕರ ಒತ್ತಡಕ್ಕೆ ಮಣಿದು ಸರ್ಕಾರ ನಿರ್ಮಿಸಿರುವ ಘಟಕವು ಪ್ರತಿ ನಿಮಿಷಕ್ಕೆ ಐನೂರು ಲೀಟರ್ ಆಮ್ಲಜನಕ ಉತ್ಪಾದಿಸಲಿದೆ.
ಈ ಆಮ್ಲಜನಕವು ಆಸ್ಪತ್ರೆಯ ಒಳಗಿರುವ ಪ್ರತಿ ಹಾಸಿಗೆಗೆ ನೇರವಾಗಿ ಪೂರೈಸುವಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದ ಕೋವಿಡ್ ಮೂರನೇ ಅಲೆಗೆ ಆಮ್ಲಜನಕ ಕೊರತೆ ನಿವಾರಣೆ ಆಗಲಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಧಿಯಲ್ಲಿ ಸ್ಥಾಪಿಸಿರುವ ಘಟಕದ ಮಧ್ಯ ಹಾದು ಹೋಗಿರುವ ಪವರ್ ವಿದ್ಯತ್ ಲೈನ್ ಸಹ ಸ್ಥಳಾಂತರಿಸಿ 18 ಲಕ್ಷ ರೂ ವೆಚ್ಚದಲ್ಲಿ ಹೊಸದಾಗಿ ವಿದ್ಯುತ್ ಲೈನ್ ಮತ್ತು ಟಿಸಿ ಅಳವಡಿಸಲಾಗಿದೆ. 24 ಲಕ್ಷ ರೂ ಸಿವಿಲ್ ವೆಚ್ಚ ಹಾಗೂ 54ಲಕ್ಷ ರೂ ವೆಚ್ಚದಲ್ಲಿ ಆಕ್ಸಿಜನ್ ಜನರಲ್ ಪ್ಲಾಂಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ರೋಗಿಗಳಿಗೆ ಇದರ ಸದುಪಯೋಗ ಲಭಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಪಪಂ ಅಧ್ಯಕ್ಷ ಹೂವಣ್ಣ, ಉಪಾಧ್ಯಕ್ಷ ನಿಖಿಲ್ ಕುಮಾರ್, ಸದಸ್ಯರಾದ ಕೃಷ್ಣಯ್ಯ, ಸುಭಾನ ಷರೀಫ್, ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್, ಸಿಬ್ಬಂದಿ ಇತರರು ಇದ್ದರು.
0 Comments