ಶಾಸಕ ಎ.ಟಿ. ರಾಮಸ್ವಾಮಿ ಮುಖ್ಯಮಂತ್ರಿಯಾಗಲಿ; ಅರಸೀಕಟ್ಟೆಯಮ್ಮ ಸನ್ನಿಧಿಯಲ್ಲಿ ಮಠಾಧೀಶರ ಆಶಯ

ಅರಸೀಕಟ್ಟೆಯಮ್ಮ ಕ್ಷೇತ್ರ ಅಭಿವೃದ್ಧಿ: ಎಟಿಆರ್ ಕೊಂಡಾಡಿದ ಮಠಾಧೀಶರು

ಅರಕಲಗೂಡು: ಶ್ರೀ ಅರಸೀಕಟ್ಟೆ ಅಮ್ಮ ದೇವಸ್ಥಾನ ಪ್ರದೇಶವನ್ನು ಧಾರ್ಮಿಕ ಸುಕ್ಷೇತ್ರವಲ್ಲದೆ ಪ್ರಸಿದ್ದ ಪ್ರವಾಸಿ ತಾಣವಾಗಿ ಪರಿವರ್ತಿಸಿ ಭಕ್ತರ ವಿಶ್ರಾಂತಿ ಧಾಮವಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.

ತಾಲೂಕಿನ ಅರಸೀಕಟ್ಟೆ ಅಮ್ಮ ದೇವಸ್ಥಾನದಲ್ಲಿ ಶನಿವಾರ ಹೇಮಾವತಿ ಮೇಲ್ಭಾಗದ ಊಟದ ಹಾಲ್ ಗಳು, ಸಮುದಾಯ ಊಟದ ಹಾಲ್ ಗಳು, ಬಾಲವನ (ಚಿರ್ಲ್ಡನ್ ಪಾರ್ಕ್, ಜಿಮ್ ಮತ್ತು ಪರಗೋಲ ಉದ್ಘಾಟಿಸಿ ಮಾತನಾಡಿದ ಅವರು, ಸುಕ್ಷೇತ್ರದ ಮಹಿಮೆ ಹೆಚ್ಚಿಸುವ ನಿಟ್ಟಿನಲ್ಲಿ ಭಕ್ತರ ಅನುಕೂಲಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಬಲಿ ಪೀಠ, ಎಡೆ ಪೀಠಗಳಿಗೆ ಪ್ರತ್ಯೇಕ ವ್ಯವಸ್ಥೆ ಒದಗಿಸಿ ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ.
ದೇವಸ್ಥಾನ ನವೀಕರಣಕ್ಕೆ ಆದ್ಯತೆ ನೀಡಲಾಗುವುದು. ಹೆಚ್ಚುವರಿ ಬಸ್ ಗಳನ್ನು ಓಡಿಸಲಾಗುವುದು. ಭಕ್ತರು ಹಾಗೂ ಈ ಭಾಗದ ಸ್ಥಳೀಯರು ಪುಣ್ಯಕ್ಷೇತ್ರದ ಪಾವಿತ್ರ‍್ಯತೆ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಯಾವ ಅಧಿಶಕ್ತಿ ದೇವಿ ಮಹಿಮೆ ಕೂಡ ಇತರರಿಗೆ ಕೆಡುಕು ಬಗೆಯುವುದಿಲ್ಲ. ಬೇರೆಯವರಿಗೆ ತೊಂದರೆ ಕೊಡುವ ಸಲುವಾಗಿ ಹರಕೆ ಹೊತ್ತು ಬರುತ್ತಾರೆ ಎನ್ನುವುದು ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿದೆ. ದೋಷ ನಿವಾರಣೆಗೆ ಬಂದು ಭಕ್ತಿಪೂರ್ವಕವಾಗಿ ಪೂಜಿಸಿದರೆ ದೇವಿ ಉತ್ಕೃಷ್ಟ ಫಲಗಳನ್ನು ಕರುಣಿಸಲಿದೆ.

ಸುಕ್ಷೇತ್ರದಲ್ಲಿ ಸಾಮೂಹಿಕ ಸೌಲಭ್ಯಗಳನ್ನು ಒದಗಿಸಲು ಶಾಸಕರ ಶ್ರಮ ಅನನ್ಯವಾಗಿದೆ. ದೈವೀಶಕ್ತಿ ಮೈಗೂಡಿಸಿಕೊಂಡು ಸಾವಯವ ರಾಜಕಾರ ನಡೆಸುತ್ತಿರುವ ಶಾಸಕರು ಶ್ರೇಷ್ಠ ವ್ಯಕ್ತಿತ್ವ ರೂಢಿಸಿಕೊಂಡಿದ್ದು ಇಂತವರು ಮುಖ್ಯಮಂತ್ರಿಯಾಗಬೇಕು, ನಾಡು ಸುಬೀಕ್ಷೆಯಾಗಿರುತ್ತದೆ ಎಂದು ಆಶಿಸಿದರು.
ಬಸವಾಪಟ್ಟಣ ತೋಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿ, ಸುಕ್ಷೇತ್ರ ಭಕ್ತರ ಇಷ್ಟಾರ್ಥ ಗಳನ್ನು ಈಡೇರಿಸುತ್ತಿದ್ದು, ಅರಕಲಗೂಡು ದಸರಾ ಮಾದರಿಯಂತೆ ಅರಸೀಕಟ್ಟೆ ದೇವತೆ ಮಹೋತ್ಸವ ನಡೆಯಬೇಕು ಎಂದರು.

ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭನಾಥ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಶಾಸಕರು ಅಭಿವೃದ್ದಿ ಕಾರ್ಯಗಳಿಗೆ ವಹಿಸುತ್ತಿರುವ ಅತೀವ ಆಸಕ್ತಿಯನ್ನು ಬಣ್ಣಿಸಿದರು.
.
ದೇವಾಲಯ ಸಮಿತಿಯ ಕೃಷ್ಣೇಗೌಡ, ದಾನಿ ಸುರೇಶ್, ಕುಮಾರ್, ಕೃಷ್ಣ, ಮುರುಳಿ, ಸತೀಶ್, ಸದಾನಂದ, ಸಿದ್ದರಾಮು ಅವರನ್ನು ಗೌರವಿಸಲಾಯಿತು.

ಸಂಪಾದಕ‌ ರವಿ

Post a Comment

0 Comments