ಜೋಡಿಗುಬ್ಬಿ ಶ್ರೀ ರಾಮ ಸೇವಾ ಸಂಘದ ಅತಿಥಿಗೃಹ ನಿರ್ಮಾಣಕ್ಕೆ ಬಬ್ಬೂರು ಕಮ್ಮೆ ಸೇವಾ ಸಮಿತಿ ಅಧ್ಯಕ್ಷ ಎ.ವಿ.ಪ್ರಸನ್ನ ಭೂಮಿಪೂಜೆ

ಅರಕಲಗೂಡು :  ಸಮೀಪದ ಜೋಡಿಗುಬ್ಬಿ ಗ್ರಾಮದಲ್ಲಿ ಶ್ರೀ ರಾಮ ಸೇವಾ ಸಂಘ ಹಾಗೂ  ಬೆಂಗಳೂರಿನ ಜೋಡಿ ಗುಬ್ಬಿ  ವಿಪ್ರ ವೃಂದದ  ಸಹಯೋಗದಲ್ಲಿ  ನೂತನವಾಗಿ ನಿರ್ಮಿಸಿರುವ  ರಾಮ ಮಂದಿರದ ಕಟ್ಟಡದ ಉದ್ಘಾಟನೆ ಹಾಗೂ ಅತಿಥಿ ಗೃಹ  ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯವನ್ನು ಭಾನುವಾರ ನೆರವೇರಿಸಲಾಯಿತು. 
ಕಾರ್ಯಕ್ರಮದ  ಅಂಗವಾಗಿ ವಿವಿಧ ಹೋಮಗಳು, ಪೂರ್ಣಾಹುತಿ, ವಿಗ್ರಹಗಳ ಪ್ರತಿಷ್ಠಾಪನೆ, ಪೂಜಾ ಕಾರ್ಯಗಳು ನಡೆದವು. ಬಳಿಕ ನಡೆದ ಕಾರ್ಯಕ್ರಮದಲ್ಲಿ  ಜೋಡಿ ಗುಬ್ಬಿ ವಿಪ್ರ ವೃಂದದ  ಅಧ್ಯಕ್ಷ ಜಿ.ಎನ್. ರಾಮಚಂದ್ರ ಮಾತನಾಡಿ ಗ್ರಾಮದ ಶಂಕರಮ್ಮನಂಜಪ್ಪ  ಅವರು 20 ವರ್ಷಗಳ ಹಿಂದೆ  ದಾನವಾಗಿ  ನೀಡಿದ್ದ ಜಾಗದಲ್ಲಿ  ಇದ್ದ ಕಟ್ಟಡ ಶಿಥಿಲವಾಗಿತ್ತು. ಇದನ್ನು ತೆರವು ಗೊಳಿಸಿ ರೂ 20 ಲಕ್ಷ ವೆಚ್ಚದಲ್ಲಿ ನೂತನ ರಾಮ ಮಂದಿರದ ಕಟ್ಟಡವನ್ನು ನಿರ್ಮಿಸಲಾಗಿದೆ.  ದಾನಿಗಳ ಕುಟುಂಬದ  ಜಿ.ಎನ್.  ರಾಮಸ್ವಾಮಿ ಮತ್ತು ಜಿ.ಆರ್.ನಾಗಭೂಷಣ್  ರೂ 10 ಲಕ್ಷ ಮೊತ್ತವನ್ನು ದಾನವಾಗಿ ನೀಡಿದ್ದಲ್ಲದೆ ಕಂಚಿನ ವಿಗ್ರಹಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇದರೊಂದಿಗೆ ಜೋಡಿ ಗುಬ್ಬಿ ಮೂಲದ ವಿಪ್ರ ಸಮುದಾಯದ ದಾನಿಗಳು ನೀಡಿದ ಕೊಡುಗೆಯನ್ನು ಸೇರಿಸಿ ಸುಂದರವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹೊರಗಿನಿಂದ ಬಂದವರು ತಂಗಲು ಅನುಕೂಲವಾಗುವಂತೆ  ಪುಟ್ಟಮ್ಮ ಸುಬ್ಬಯ್ಯ ಮತ್ತು  ಸುಬ್ಬಮ್ಮ ದೇವರಯ್ಯ ಕುಟುಂಬದವರು ಕೊಡುಗೆಯಾಗಿ ನೀಡಿರುವ  ನಿವೇಶನದಲ್ಲಿ ರಾಮಮಂದಿರದ ಅತಿಥಿ ಗೃಹ ನಿರ್ಮಿಸಲು ಉದ್ದೆಶಿಸಿದ್ದು ಇದಕ್ಕೂ ದೇಣಿಗೆ ನೀಡಿ ಸಹಕರಿಸುವಂತೆ  ಮನವಿ ಮಾಡಿದರು. 
ಕಾರ್ಯಕ್ರಮದಲ್ಲಿ  ದಾನಿಗಳ ಕುಟುಂಬದ  ವಿಜಯ ರಮೇಶ್,  ಹಾಗೂ ಗ್ರಾಮದ ಹಿರಿಯರಾದ ಜಿ .ಡಿ.ಶಿವರಾಮಯ್ಯ, ಜಿ.ವಿ.ವಿಶ್ವೇಶ್ವರಯ್ಯ, ಛಾಯಮ್ಮ, ನರಸಮ್ಮ  ಅವರನ್ನು ಗೌರವಿಸಲಾಯಿತು.  ಬಬ್ಬೂರು ಕಮ್ಮೆ ಸೇವಾ ಸಮಿತಿ ಅಧ್ಯಕ್ಷ ಎ.ವಿ.ಪ್ರಸನ್ನ, ಗಮಕ ವಿದ್ವಾನ್ ನಿರ್ಮಲಾ ಪ್ರಸನ್ನ,  ಶ್ರೀರಾಮ ಸೇವಾ ಸಂಘದ ಅಧ್ಯಕ್ಷ ಜಿ.ಎಚ್.ನರಸಿಂಹಯ್ಯ, ಕಾರ್ಯಾಧ್ಯಕ್ಷ ಜಿ.ಎಸ್. ಮುರಳೀಧರ್,  ಪ್ರಮುಖರಾದ ಜಿ.ಎಂ.ಅಶ್ವಥ್, ಶ್ಯಾಮ್ ಸುಂದರ್ ಉಪಸ್ಥಿತರಿದ್ದರು.  ವಿವಿಧ ಸ್ಥಳಗಳಿಂದ ಬಂದಿದ್ದ ಭಕ್ತರಿಗೆ  ಅನ್ನದಾಸೋಹ  ಏರ್ಪಡಿಸಲಾಗಿತ್ತು.

Post a Comment

0 Comments