ಅರಕಲಗೂಡು: ಪಪಂ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕುರಿತು ಸದಸ್ಯರ ನಡುವೆ ಮಾತಿನ ಚಕಮಕಿ ಏರ್ಪಟ್ಟು ಹಸಿ ಬಿಸಿ ಚರ್ಚೆಗೆ ಗ್ರಾಸವಾಯಿತು.
ಆಗಸ್ಟ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಂಡನೆಯಾದ ಮಾರ್ಚ ನಿಂದ ಜೂನ್ ಮಾಹೆಯವರೆಗಿನ ಜಮಾ ಖರ್ಚಿನಲ್ಲಿ ತಾಳೆಯಾಗದಿರುವ ಕಾರಣ ಅದನ್ನು ಸರಿಪಡಿಸಿ ಮಂಡಿಸಿರುವ ವಿಷಯದ ಕುರಿತು ಸೋಮವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಲೋಪವಾಗಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆದ ಬಳಿಕ ರೂ 27 ಲಕ್ಷ ಹಣ ದುರುಪಯೋಗವಾಗಿದ್ದು ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಹಿಗಿರುವಾಗ ಲೋಪ ಸರಿಪಡಿಸಲಾಗಿದೆ ಎಂದು ಅನುಮೋದನೆಗೆ ಮತ್ತೆ ಸಭೆಯಲ್ಲಿ ಮಾಢಿರುವ ಔಚಿತ್ಯವಾದರೂ ಏನು ಎಂದು ಸದಸ್ಯ ರಮೇಶ್ ವಾಟಾಳ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸದಸ್ಯರಾದ ರಶ್ಮಿ, ಪ್ರದೀಪ್ ಕುಮಾರ್, ಅನಿಕೇತನ್ ದನಿಗೂಡಿಸಿದರು. ಈ ಕುರಿತು ತನಿಖೆ ನಡೆಯಲಿದ್ದು ಜಿಲ್ಲಾಧಿಕಾರಿಗಳಿಂದಲೂ ಪತ್ರ ಬಂದಿದೆ ಎಂದು ಅಧ್ಯಕ್ಷ ಹೂವಣ್ಣ ಸ್ಪಷ್ಟನೆ ನೀಡಿದರು
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಯ್ಕೆ ಕುರಿತು ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. 12 ಮಂದಿ ಸದಸ್ಯರು ಸ್ಥಾಯಿ ಸಮಿತಿ ರಚನೆ ಮಾಡಿ ಸದಸ್ಯ ಜೆಡಿಎಸ್ ನ ಎಂ.ಕೆ.ಕೃಷ್ಣಯ್ಯ ಅವರನ್ನುಅಧ್ಯಕ್ಷರಾಗಿ ಮಾಡುವಂತೆ ಕೋರಿರುವ ವಿಷಯ ಚರ್ಚೆಗೆ ಬಂದಾಗ ಕಾಂಗ್ರಸ್ ಸದಸ್ಯರಾದ ಪ್ರದೀಪ್ ಕುಮಾರ್ ಹಾಗೂ ಟಿ.ಎಸ್. ಅನಿಕೇತನ್ ವಿರೋಧ ವ್ಯಕ್ತಪಡಿಸಿದರು.
ಜೆಡಿಎಸ್ ಮತ್ತು ಕಾಂಗ್ರಸ್ ಹೊಂದಾಣಿಕೆಯ ಮೇಲೆ ಪಪಂನಲ್ಲಿ ಅಧಿಕಾರ ಹಿಡಿದಿವೆ. ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಗೆ ಕೊಟಿದ್ದು ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಶಾಸಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ, ವಿಷಯ ಮುಂದೂಡುವಂತೆ ಒತ್ತಾಯಿಸಿದರು.
ಇದಕ್ಕೆ ಬಿಜೆಪಿಯ ರಮೇಶ್ ವಾಟಾಳ್ ಮತ್ತು ಎಚ್. ಎಸ್.ರಶ್ಮಿ ವಿರೋಧ ವ್ಯಕ್ತಪಡಿಸಿದರು. 17 ಮಂದಿ ಸದಸ್ಯರಲ್ಲಿ 12 ಮಂದಿ ಬೆಂಬಲಿಸಿರುವ ಹಿನ್ನೆಲೆಯಲ್ಲಿ ಬಹುಮತದ ಆಧಾರದ ಮೇಲೆ ಕೃಷ್ಣಯ್ಯ ಅವರನ್ನು ಆಯ್ಕೆ ಮಾಡುವಂತೆ ಆಗ್ರಹಿಸಿದರು.
ಈ ಹಂತದಲ್ಲಿ ಕಾಂಗ್ರಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಎರಡೂ ಪಕ್ಷಗಳವರು ಸೇರಿ ಆಯ್ಕೆ ಮಾಡಿಕೊಳ್ಳುವುದಾದರೆ ಸಭೆಯಲ್ಲಿ ಏಕೆ ವಿಷಯ ಮಂಡಿಸಿದ್ದೀರಿ ಎಂದು ಸದಸ್ಯೆ ರಶ್ಮಿ ಪ್ರಶ್ನಿಸಿದರು. ಸದಸ್ಯ ಕೃಷ್ಣಯ್ಯ ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ. 12 ಜನ ಸದಸ್ಯರು ವಿಶ್ವಾಸ ಇಟ್ಟು ಬೆಂಬಲ ನೀಡಿದ್ದರೂ ಆಕ್ಷೇಪ ಸಲ್ಲಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಥಳಿಯ ಯೋಜನಾ ಪ್ರಾದಿಕಾರಕ್ಕೆ ಸದಸ್ಯರೊಬ್ಬರನ್ನು ನೇಮಕ ಮಾಡುವ ವಿಚಾರವೂ ಚರ್ಚೆಗೆ ಗ್ರಾಸ ಒದಗಿಸಿತು. ಇದನ್ನೂ ಮುಂದಿನ ಸಭೆಗೆ ಮುಂದೂಡಿ, ಈ ಬಗ್ಗೆಯೂ ಶಾಸಕರೊಂದಿಗೆ ಚರ್ಚಿಸಬೇಕು ಎಂದು ಸದಸ್ಯ ಕೃಷ್ಣಯ್ಯ ಆಗ್ರಹಿಸಿದರು. ಎಲ್ಲವನ್ನೂ ಶಾಸಕರೆ ನಿರ್ಧರಿಸುವುದಾದರೆ ನಾವು ಇಲ್ಲಿರುವುದಾದರೂ ಏಕೆ ಎಂದು ಸದಸ್ಯ ರಮೇಶ್ ವಾಟಾಳ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರತ್ಯೇಕ ತುರ್ತು ಸಭೆ ನಡೆಸಿ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಯೋಜನಾ ಪ್ರಾಧಿಕಾರಕ್ಕೆ ಸದಸ್ಯರ ಆಯ್ಕೆ ನಡೆಸುವಂತೆ ಉಪಾಧ್ಯಕ್ಷ ನಿಖಿಲ್ ಕುಮಾರ್ ಸಲಹೆ ಮಾಡಿದರು.
ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮಹಿಳೆಯರಿಗೆ ಆದ್ಯತೆ ನೀಡುವಂತೆ ಸದಸ್ಯೆ ರಶ್ಮಿ ಒತ್ತಾಯಿಸಿದರು.
ಬಿಜೆಪಿ ಸದಸ್ಯರು ಆಯ್ಕೆಯಾಗಿರುವ ವಾರ್ಡ್ ಅಭಿವೃದ್ಧಿಯಲ್ಲಿ ಮಲ ತಾಯಿ ಧೋರಣೆ ತೋರಿಸಲಾಗುತ್ತಿದೆ. ತಾವು ವಿರೋಧ ಪಕ್ಷದಲ್ಲಿದ್ದರೂ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಿರುವುದಾಗಿ ಶಾಸಕರು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರ ತಾರತಮ್ಯ ಮಾಡದೆ ಅನುದಾನ ನೀಡಿದರೂ ಇಲ್ಲಿ ಭೇದ ಮಾಡುತ್ತಿರುವುದು ಖಂಡನೀಯ ಎಂದು ಸದಸ್ಯ ರಮೇಶ್ ವಾಟಾಳ್ ವಾಗ್ದಾಳಿ ನಡೆಸಿದರು.
ಅಭಿವೃದ್ಧಿಯಲ್ಲಿ ಯಾವುದೇ ತಾರತಮ್ಯ ನಡೆಸಿಲ್ಲ. ಈ ಕುರಿತು ಅನುಮಾನ ಬೇಡ, ಎಲ್ಲ ವಾರ್ಡಗಳಲ್ಲೂ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದಾಗಿ ಅಧ್ಯಕ್ಷ ಹೂವಣ್ಣ ಹೇಳಿದರು. ಮುಖ್ಯಾಧಿಕಾರಿ ಶಿವಕುಮಾರ್ ಇದ್ದರು.
0 Comments