ಅರಕಲಗೂಡು: ತಾಲೂಕಿನಲ್ಲಿ ಹಾದು ಹೋಗಿರುವ ಮಾಗಡಿ- ಸೋಮವಾಪೇಟೆ ಮಾರ್ಗದ ರಸ್ತೆ ವಿಸ್ತರಣೆ ಕಡಿತಗೊಳಿಸುತ್ತಿರುವ ಪರಿಣಾಮ ಕಳೆದ 70 ವರ್ಷಗಳಿಂದ ಅಭಿವೃದ್ಧಿ ಕಾಣದೆ ತೀವ್ರ ಹದಗೆಟ್ಟು ಹೋಗಿದ್ದ ಸಾವಿನ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಮತ್ತೆ ಜೀವಂತವಾಗಿ ಕಾಡಲಿದೆ.
ಬೆಂಗಳೂರು- ಜಾಲ್ಸೂರು ಮಾರ್ಗದ ಈ ರಸ್ತೆ ಸ್ವಾತಂತ್ರ್ಯಾ ನಂತರ ಸಮರ್ಪಕವಾಗಿ ಅಭಿವೃದ್ಧಿ ಕಾಣದೆ ಕಿಷ್ಕಿಂದೆಯಾಗಿದ್ದು ಅಲ್ಲಲ್ಲಿ ಹೊಂಡಗಳು ಬಾಯ್ತೆರೆದು ಗುಂಡಿಗಳ ಸಾಮ್ರಾಜ್ಯವಾಗಿತ್ತು. ಸಂಪೂರ್ಣ ಹದಗೆಟ್ಟಿದ್ದ ರಸ್ತೆ ಮಳೆಗಾಲದಲ್ಲಿ ಕೆಸರು ಮಯವಾದರೆ ಬೇಸಿಗೆಯಲ್ಲಿ ದೂಳು ಆವರಿಸಿ ಪ್ರಯಾಣಿಕರಿಗೆ ನರಕದ ಶಿಕ್ಷೆ ನೀಡುತ್ತಿತ್ತು. ಕಳೆದ ವಾರದ ಸುರಿದ ಭಾರಿ ಮಳೆಗೆ ಕಾಳೇನಹಳ್ಳಿ ಕೆರೆ ಕೋಡಿ ಬಿದ್ದು ರಸ್ತೆಯಲ್ಲಿ ಹೊಳೆಯಾಗಿ ನೀರು ಹರಿದು ಸಂಪರ್ಕ ಕಡಿತಗೊಂಡಿತ್ತು. ಈ ಮಾರ್ಗದ ಗುಂಡಿ ರಸ್ತೆಗಿಳಿದು ವಾಹನ ಸವಾರರು ಅನುಭವಿಸಿದ ಕಷ್ಟ ಮಾತ್ರ ಅಷ್ಟಿಷ್ಟಲ್ಲ. ಸಾಕಷ್ಟು ಸಲ ರಸ್ತೆ ಅಭಿವೃದ್ಧಿ ಪಡಿಸುವಂತೆ ರೈತ ಸಂಘಟನೆಗಳು, ಸಾರ್ವಜನಿಕರ ನಡೆಸಿದ ಪ್ರತಿಭಟನೆಗಳು ಇತಿಹಾಸದ ಪುಟ ಸೇರಿವೆ. ರಸ್ತೆ ಅಪಘಾತದಲ್ಲಿ ಸಾವು- ನೋವುಗಳು ಸಂಭವಿಸಿ ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿತ್ತು.
ಸ್ವಾತಂತ್ರ್ಯಾ ನಂತರ ಹಲವು ದಶಕಗಳ ಕಾಲ ಗುಂಡಿ ಬಿದ್ದು ಹಾಳಾಗಿದ್ದ ಮಾಗಡಿ- ಸೋಮವಾರಪೇಟೆ ಮಾರ್ಗದ 166 ಕಿಮೀ ಉದ್ದದ ಎಸ್‌ಎಚ್- 85 ರಸ್ತೆಗೆ 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 1144 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಮಂಜೂರಾಯಿತು. ಅಂದು ಮಾಜಿ ಸಚಿವ ಎ. ಮಂಜು ಹಾಗೂ ಸಿದ್ದರಾಮಯ್ಯ ಅವರು ಅರಕಲಗೂಡಿನಲ್ಲಿ ಕೆಶಿಪ್ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ಕೂಡ ನಡೆಸಿದ್ದರು. 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ರಾಮನಾಥಪುರದಲ್ಲಿ ಈ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನಡೆಸಿದ್ದರು. ಆಂಧ್ರ ಮೂಲದ ಕೆ.ಎನ್.ಆರ್. ಕಂಪನಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ.
ತಾಲೂಕಿನಲ್ಲಿ ಹಾದು ಹೋಗಿರುವ 32 ಕಿಮೀ ಉದ್ದದ ಈ ಮಾರ್ಗದ ರಸ್ತೆ ಅಭಿವೃದ್ಧಿ ಪಡಿಸಲು ಕಳೆದ ಎರಡು ವರ್ಷಗಳಿಂದಲೇ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಇದೀಗ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಮೈಸೂರು ಜಿಲ್ಲೆಯ ಸಾಲಿಗ್ರಾಮ- ಹರದನಹಳ್ಳಿ ಕಡೆ ಕಾಮಗಾರಿ ನಡೆಸಿ, ಕಳೆದ ತಿಂಗಳು ತಾಲೂಕಿನ ಕೇರಳಾಪುರ ಭಾಗದಲ್ಲಿ ಕೆಲಸ ಆರಂಭಿಸಲಾಯಿತು. ಅಲ್ಲಿ 16 ಮೀ ರಸ್ತೆ ವಿಸ್ತೀರ್ಣ ಪಡಿಸಿದ್ದು ತಾಲೂಕಿನ ಭಾಗದಲ್ಲಿ ಕಡಿತಗೊಳಿಸಲಾಗಿದೆ.
ಇದರಿಂದ ರೊಚ್ಚಿಗೆದ್ದ ಕೇರಳಾಪುರ ಗ್ರಾಮಸ್ಥರು ಕಾಮಗಾರಿಗೆ ತಡೆಯೊಡ್ಡಿದ್ದರಿಂದ ಕೆಲಸ ಸ್ಥಗಿತಗೊಂಡಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹೊಂದಿರುವ ಕೇರಳಾಪುರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಕಿರಿದಾದ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಲಿದೆ. ಇಲ್ಲಿ ರಸ್ತೆ ವಿಸ್ತೀರ್ಣ ಕಡಿತಗೊಳಿಸಿರುವುದು ಸರಿಯಲ್ಲ, ಜನಪ್ರತಿನಿಧಿಗಳ ನಿರ್ಲಕ್ಷö್ಯ ಧೋರಣೆ ಇದಕ್ಕೆ ಕಾರಣ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಬಸವಾಪಟ್ಟಣದಲ್ಲಿ ಈ ಮಾರ್ಗದ ರಸ್ತೆ ಸುಮಾರು ಮುಕ್ಕಾಲು ಕಿ.ಮೀ ಉದ್ದದವರೆಗೆ ಹಾದು ಹೋಗಿದ್ದು ಎರಡು ಬದಿ ತೀರ ಕಿಷ್ಕಿಂದೆಯಾಗಿದೆ. ವಾಣಿಜ್ಯ ಪ್ರದೇಶವಾದ ಇಲ್ಲಿಯೂ 16 ಮೀ ವಿಸ್ತೀರ್ಣ ಪಡಿಸದೆ ಕೇವಲ 11 ಮೀ. ಗೆ ಸೀಮಿತಗೊಳಿಸಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಮತ್ತು ರೈತ ಸಂಘದ ಕಾರ್ಯಕರ್ತರು ಕಳೆದ ವಾರ ಪ್ರತಿಭಟನೆ ನಡೆಸಿ ಕಾಮಗಾರಿಗೆ ತಡೆಯೊಡ್ಡಲಾಗಿದೆ. ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಡಿಪಿಆರ್ ಬದಲಾಯಿಸಿ ರಸ್ತೆ ವಿಸ್ತೀರ್ಣ ಹೆಚ್ಚಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಮುಖ್ಯ ವಿವರಗಳು:
ಸದ್ಯಕ್ಕೆ ಕರಾವಳಿ ಜಿಲ್ಲೆಗಳ ಪ್ರಯಾಣಿಕರು ಮಂಗಳೂರು- ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಮಡಿಕೇರಿ ಭಾಗದ ಪ್ರಯಾಣಿಕರು ಮೈಸೂರು ಇಲ್ಲವೇ ರಾಮನಾಥಪುರ, ಹೊಳೆನರಸೀಪುರ, ಚನ್ನರಾಯಪಟ್ಟಣ ಮಾರ್ಗವಾಗಿ ಸುತ್ತಿಬಳಸಿ ಬೆಂಗಳೂರಿಗೆ ತಲುಪುವ ಅನಿವಾರ್ಯವಿದೆ. ಈಗ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಅಭಿವೃದ್ಧಿ ಪಡಿಸಿದರೆ ಕರಾವಳಿ- ಕೊಡಗಿನ ಜನರಿಗೆ ಬೆಂಗಳೂರು ಹತ್ತಿರದ ಸಂಪರ್ಕ ಬೆಸೆಯಲಿದ್ದು ಅಪಾರ ಪ್ರಯಾಣಿಕರು ಈ ಮಾರ್ಗವನ್ನೆ ಅವಲಂಬಿಸುತ್ತಾರೆ. ಇದರಿಂದಾಗಿ ಮೊದಲೇ ಕಿಷ್ಕಿಂದೆಯಾಗಿ ವಾಹನ ದಟ್ಟಣೆಯಿಂದ ಕೂಡಿರುವ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಗೋಳು ಮತ್ತಷ್ಟು ಬಿಗಡಾಯಿಸಲಿದೆ.
ಕಳೆದ 70 ವರ್ಷಗಳಿಂದ ಅನುಭವಿಸಿದ ಸಾವು- ನೋವುಗಳಿಗೆ ಈಗಲೂ ಮುಕ್ತಿ ಸಿಗದಾಗುತ್ತದೆ. ಅದೆಷ್ಟೋ ವರ್ಷಗಳ ಹಿಂದೆಯೇ ಈ ರೀತಿಯಾಗಿ ರಸ್ತೆ ಅಭಿವೃದ್ಧಿ ಪಡಿಸಬಹುದಿತ್ತು. ಇಷ್ಟು ಸುದೀರ್ಘ ವರ್ಷಗಳ ನಂತರವೂ ರಸ್ತೆ ಸಮರ್ಪಕವಾಗಿ ಅಭಿವೃದ್ಧಿ ಕಾಣುತ್ತಿಲ್ಲ. ಜನಪ್ರತಿನಿಧಿಗಳು ಮೌನ ವಹಿಸುತ್ತಿರುವುದು ಏಕೆ ಎಂಬುದು ಈ ಭಾಗದ ಜನರ ಪ್ರಶ್ನೆಯಾಗಿದೆ.
ದೇಶದಲ್ಲಿ ಸಂಪನ್ಮೂಲ ಕೊರತೆಯಿಂದಾಗಿ ವಿಶ್ವಬ್ಯಾಂಕ್ ಸಾಲ ಪಡೆದು ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಮಾರ್ಗದ ಯೋಜನಾ ವರದಿಯೇ ಅವೈಜ್ಞಾನಿಕವಾಗಿದ್ದು ರಸ್ತೆ ವಿಸ್ತರಣೆ ಹೆಚ್ಚಿಸುವಂತೆ ಈಗಾಗಲೇ ಬಸವಾಪಟ್ಟಣದಲ್ಲಿ ವಿವಿಧ ಸಂಘಟನೆಗಳೊAದಿಗೆ ಪ್ರತಿಭಟನೆ ನಡೆಸಿ ಕೆಶಿಪ್ ಇಂಜಿನಿಯರ್‌ಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟ ಹಮ್ಮಿಕೊಳ್ಳಲಾಗುವುದು. ಸುತ್ತಮುತ್ತಲಿನ ಸಾರ್ವಜನಿಕರು, ರಸ್ತೆ ಬಳಕೆದಾರರು ಸೂಕ್ಷö್ಮವಾಗಿ ಗಮನ ಹರಿಸಿ ಸಹಕರಿಸಬೇಕು.
- ಯೋಗಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ.
ಹಾಸನ ಜಿಲ್ಲೆಯ ಗಡಿ ಭಾಗದಲ್ಲಿರುವ ಕೇರಳಾಪುರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಹೊಳೆನರಸೀಪುರ, ಪಿರಿಯಾಪಟ್ಟಣ, ಕೆ.ಆರ್.ನಗರ ತಾಲೂಕುಗಳ ಸಂಗಮ ಸ್ಥಳವಾಗಿದೆ. ಇಲ್ಲಿ ಕೇವಲ 11 ಮೀ ರಸ್ತೆ ವಿಸ್ತೀರ್ಣ ಪಡಿಸಿದರೆ ಓಡಾಟಕ್ಕೆ ತೊಂದರೆಯಾಗಲಿದೆ. ರಸ್ತೆ ವಿಸ್ತೀರ್ಣ ಹೆಚ್ಚಿಸಿ ಡಿವೈಡರ್, ಪುಟ್‌ಬಾತ್ ನಿರ್ಮಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಕಾಮಗಾರಿ ನಿಲ್ಲಿಸಿದ್ದಾರೆ.
- ಶಿವಣ್ಣ, ಗ್ರಾಪಂ ಸದಸ್ಯ, ಕೇರಳಾಪುರ.
ವಿಶ್ವ ಬ್ಯಾಂಕ್‌ನಲ್ಲಿ ಸಾಲ ಪಡೆದು 2017ರಲ್ಲೇ ರಸ್ತೆ ಅಭಿವೃದ್ಧಿಗೆ ಯೋಜನಾ ವರದಿ ತಯಾರಿಸಲಾಗಿದೆ. ಡಿಪಿಆರ್ ಪ್ರಕಾರವೇ ರಸ್ತೆ ವಿಸ್ತರಣೆ ಪಡಿಸಲಾಗುತ್ತಿದೆ. ಇದರಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಲು ಬಿಡುವುದಿಲ್ಲ.
- ಎ.ಟಿ. ರಾಮಸ್ವಾಮಿ, ಶಾಸಕ.
ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಅಭಿವೃದ್ಧಿ ಪಡಿಸಲು ತಾಲೂಕಿನಲ್ಲಿ ಈಗಾಗಲೇ ಅಗತ್ಯವಾದ ಭೂಮಿ ಸ್ವಾಧೀನ ಪಡಿಸಿಕೊಂಡು ಪರಿಹಾರ ಕೂಡ ಒದಗಿಸಲಾಗಿದೆ. ಆದರೆ ಕೇರಳಾಪುರ ಗಡಿ ಭಾಗದಿಂದ ಮಾತ್ರ ರಸ್ತೆ ವಿಸ್ತರಣೆ ಕಡಿತಗೊಳಿಸಲಾಗುತ್ತಿದೆ. ಕೆಶಿಪ್ ಇಂಜಿನಿಯರ್ ಕರೆಸಿ ಚರ್ಚಿಸಲಾಗಿದೆ. ಡಿಪಿಆರ್ ಬದಲಾಯಿಸದಿದ್ದರೆ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ.
- ಎ. ಮಂಜು, ಮಾಜಿ ಸಚಿವ.
ಕೇರಳಾಪುರ ಮತ್ತು ಬಸವಾಪಟ್ಟಣ ಭಾಗದಲ್ಲಿ ರಸ್ತೆ ವಿಸ್ತೀರ್ಣ ಹೆಚ್ಚಿಸುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಈ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಅಲ್ಲಿತನಕ ಊರ ಹೊರ ಭಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.
- ಮಂಜುನಾಥ್, ಕೆಶಿಪ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್.
ಕೇರಳಾಪುರ, ಬಸವಾಪಟ್ಟಣದಲ್ಲಿ 11 ಮೀ. ರಸ್ತೆ ವಿಸ್ತೀರ್ಣ ಪಡಿಸಲು ಡಿಪಿಆರ್ ಸಿದ್ದಪಡಿಸಿದ್ದು ಅದರಂತೆ ಕಾಮಗಾರಿ ಆರಂಭಿಸಲಾಗಿತ್ತು. ಡಿಪಿಆರ್ ವಿರೋಧಿಸಿ ಗ್ರಾಮಸ್ಥರು ಕಾಮಗಾರಿಗೆ ತಡೆ ನೀಡಿದ್ದಾರೆ. ಊರ ಹೊರ ಭಾಗದಲ್ಲಿ 10 ಮೀ ವಿಸ್ತರಣೆಯಾಗಲಿದೆ. ಮೂಲೇ ಹೊಸಹಳ್ಳಿ ಹಾಗೂ ರಾಮನಾಥಪುರದಿಂದ ಕೊಣನೂರು ಮಾರ್ಗದವರೆಗೆ ಚತುಷ್ಪತ ರಸ್ತೆ ನಿರ್ಮಾಣವಾಗಲಿದೆ.
- ಓಬಲು ರೆಡ್ಡಿ, ಕೆ.ಎನ್.ಆರ್. ಕಂಪನಿ ಇಂಜಿನಿಯರ್.
0 Comments