ಅರಕಲಗೂಡು: ಕರೊನಾ ಸೋಂಕಿನಂತೆಯೇ ಮಾರಕವಾಗಿ ಹಬ್ಬುತ್ತಿರುವ ಕಾಲು ಬಾಯಿ ರೋಗಕ್ಕೆ ತುತ್ತಾಗಿ ಜಾನುವಾರುಗಳು ಸಾವಿಗೀಡಾಗುತ್ತಿದ್ದು ಸರ್ಕಾರ ಪರಿಹಾರ ಒದಗಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಆಗ್ರಹಿಸಿದರು.
ತಾಲೂಕಿನ ಮದಲಾಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ ಮಹಾಮಾರಿಯಂತೆಯೇ ಜಾನುವಾರುಗಳು ರೋಗಬಾಧೆಗೆ ಸಿಲುಕಿ ಸಾಯುತ್ತಿವೆ.
ಈ ಹಿಂದೆ ಸರ್ಕಾರ ನೀಡುತ್ತಿದ್ದ ಹತ್ತು ಸಾವಿರ ರೂ ಪರಿಹಾರವನ್ನು ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ ಇತ್ತ ಸೂಕ್ತ ಲಸಿಕೆಯೂ ಸಿಗದೆ ಅತ್ತ ಪರಿಹಾರ ಕೂಡ ಇಲ್ಲದೆ ಐವತ್ತರಿಂದ ಆರವತ್ತು ಸಾವಿರ ರೂ ಬೆಲೆ ಬಾಳುವ ಹಸುಗಳು ಸತ್ತು ಹೈನುಗಾರಿಕೆಯನ್ನೆ ನೆಚ್ಚಿಕೊಂಡಿದ್ದ ರೈತ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಸರ್ಕಾರ ಮರು ಪರಿಶೀಲಿಸಿ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಳ್ಳಿಗಳಲ್ಲಿ ರೋಗದ ತೀವ್ರತೆಗೆ ಅನೇಕ ಹಸುಗಳು ನರಳುತ್ತಿವೆ. ಇವುಗಳ ಜೀವ ಉಳಿಸುವ ಉದ್ದೇಶದಿಂದ ಗ್ರಾಮದಲ್ಲಿ ಲಸಿಕಾ ಶಿಬಿರ ನಡೆಸಲಾಗುತ್ತಿದೆ. ಹಾಲು ಉತ್ಪಾದಕರ ಸಂಘದ ಸಹಕಾರದಿಂದ ಇನ್ನಷ್ಟು ಔಷದಿ ವಿತರಿಸಲು ಆದ್ಯತೆ ವಹಿಸುವೆ, ಎಲ್ಲರೂ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಪಶು ವೈದ್ಯಾಧಿಕಾರಿ ಡಾ. ಚೇತನ್ ಮಾತನಾಡಿ, ಕೋವಿಡ್ ಸೋಂಕಿನAತೆ ಜಾನುವಾರುಗಳಿಗೆ ಕಾಲು ಬಾಯಿ ರೋಗ ಹರಡುತ್ತಿದೆ. ಹೀಗಾಗಿ ರೋಗ ಕಾಣಿಸಿಕೊಂಡ ಹಸುಗಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಪಡೆದು ಆರೈಕೆ ಮಾಡಬೇಕು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಡುವೆಯೂ ಹಳ್ಳಿಗಳಲ್ಲಿ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಗ್ರಾಮದಲ್ಲಿ ನೂರೈವತ್ತಕ್ಕೂ ಹೆಚ್ಚು ಹಾಲು ಕರೆಯುವ ಹಸುಗಳು, ಗಬ್ಬದ ರಾಸುಗಳಿದ್ದು ರೋಗಕ್ಕೆ ಸಿಲುಕಿ ಒದ್ದಾಡುತ್ತಿವೆ. ಸೂಕ್ತ ಲಸಿಕೆ ನೀಡಿ ಬಡ ರೈತ ಕುಟುಂಬಗಳನ್ನು ಉಳಿಸಬೇಕು ಎಂದು ಗ್ರಾಮಸ್ಥರು ವೈದ್ಯರ ಬಳಿ ಅಳಲು ತೋಡಿಕೊಂಡರು.
ಮುಖಂಡರಾದ ಲೋಕೇಶ್, ರವಿಕುಮಾರ್, ಪಶು ಆಸ್ಪತ್ರೆ ಸಹಾಯಕ ಮಂಜಪ್ಪ ಮತ್ತು ಸಿಬ್ಬಂದಿ ಇದ್ದರು.
0 Comments